ಧಾರವಾಡ: ಪಂಚಪೀಠಗಳಲ್ಲಿ ಒಂದಾದ ಹಿಮವತ್ಕೇದಾರದ ವೈರಾಗ್ಯ ಪೀಠದ ಹಿಂದಿನ ಲಿಂಗೈಕ್ಯ ಜಗದ್ಗುರುಗಳಾದ ಶ್ರೀಶ್ರೀಶ್ರೀ 1008 ನೀಲಕಂಠಲಿಂಗ ಶಿವಾಚಾರ್ಯ ಭಗವತ್ಪಾದರ ಪಟ್ಟಾಧಿಕಾರದ ಶತಮಾನೋತ್ಸವ ಮಹೋತ್ಸವವನ್ನು ಬರುವ ಅಕ್ಟೋಬರ್ 1 2021 ರಿಂದ 1ನೇ ಅಕ್ಟೋಬರ್ 2022ರವರೆಗೆ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ವಿಶ್ವ ವೀರಶೈವ ಸಂಸ್ಕೃತಿ ಸಂರಕ್ಷಣೆ ಸಮಿತಿ ಸಂಚಾಲಕ ನಾಗನಗೌಡ ನೀರಲಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ನಾವೆಲ್ಲರೂ ಒಂದು ವಿಶ್ವದ ಮಾನವರೆಲ್ಲರೂ ನಮ್ಮ ಬಂಧು ಎಂಬ ಸಂದೇಶದೊಂದಿಗೆ ಶ್ರೀಗಳ ಪಟ್ಟಾಧಿಕಾರ ಮಹೋತ್ಸವದ 100 ವರ್ಷದ ಕಾರ್ಯಕ್ರಮವನ್ನು ಗುರುಗಳ ಜನ್ಮ ಸ್ಥಳವಾದ ಹಳೇ ಧಾರವಾಡ ಜಿಲ್ಲೆ ಈಗಿನ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲೇ ದೇವರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು 22 ಗುರುವಿರಕ್ತ ಮಠಾಧೀಶರ ಸಮ್ಮುಖದಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ ಎಂದರು.
ಮುಂದಿನ ಒಂದು ತಿಂಗಳ ನಂತರ ಈ ವಾರ್ಷಿಕ ಕಾರ್ಯಕ್ರಮದ ಅಡಿಯಲ್ಲಿ ಶ್ರೀಗಳ ಊರಿನಿಂದ ರಾಮೇಶ್ವರದವರೆಗೆ ಹಾಗೂ ರಾಮೇಶ್ವರದಿಂದ ಕೇದಾರನಾಥ ದೇವಸ್ಥಾನದವರೆಗೆ ದಕ್ಷಿಣ ಮತ್ತು ಉತ್ತರ ಭಾರತ ಏಕತಾ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಸಮಾರೋಪ ಸಮಾರಂಭ 1ನೇ ಅಕ್ಟೋಬರ್ 2022ರಂದು ಉತ್ತರಾಖಂಡ ರಾಜ್ಯದ ಕೇದಾರ ಪೀಠದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಮುಂದಿನ ವರ್ಷ ನಡೆಯುವ ಸಮಾರೋಪ ಸಮಾರಂಭದಲ್ಲಿ 1) ಶ್ರೀ ಭದ್ರಕಾಳಿ ಪ್ರಶಸ್ತಿ, 2) ಶ್ರೀ ಭದ್ರ ಪ್ರಶಸ್ತಿ, 3) ಶ್ರೀ ರುದ್ರ ಪ್ರಶಸ್ತಿ, 4) ಶ್ರೀ ನಂದೀಶ್ವರ ಪ್ರಶಸ್ತಿ, 5) ಶ್ರೀ ವೃಷಭ ಪ್ರಶಸ್ತಿ, 6) ಶ್ರೀ ಭೃಂಗಿ ಪ್ರಶಸ್ತಿ, 7) ಶ್ರೀ ಸ್ಕಂದ ಪ್ರಶಸ್ತಿ, 8) ಶ್ರೀ ಘಂಟಾಕರಣ ಪ್ರಶಸ್ತಿ, 9) ಶ್ರೀ ಕಾಳಭೈರವ ಪ್ರಶಸ್ತಿ, 10) ಶ್ರೀ ಅಮೋಘ ಸಿದ್ಧ ಪ್ರಶಸ್ತಿ, 11) ಶ್ರೀ ವಿಶ್ವಕರ್ಮ ಪ್ರಶಸ್ತಿ, 12) ಶ್ರೀ ಭಗೀರಥ ಪ್ರಶಸ್ತಿ, 13) ಶ್ರೀ ಶಿವಶರಣರ ಪ್ರಶಸ್ತಿಗಳನ್ನು ಜಗತ್ತಿನಾದ್ಯಂತ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸೇವೆ ಸಲ್ಲಿಸಿದ ಜನರಿಗೆ ಪಂಚಾಚಾರ್ಯರ ಆಶೀರ್ವಾದದೊಂದಿಗೆ ಶ್ರೀ ಗುರುರಕ್ಷೆ ಸಮೇತ ಕೇದಾರನಾಥ ದೇವಸ್ಥಾನದ ಆವರಣದಲ್ಲಿ ನೀಡಲಾಗುವುದು ಎಂದರು.
Kshetra Samachara
23/09/2021 08:59 pm