ಧಾರವಾಡ: ಸರ್ಕಾರದ ನಿರ್ದೇಶನದಂತೆ ಬರುವ ಸೆಪ್ಟೆಂಬರ್ 17 ರ ಶುಕ್ರವಾರದಂದು ಬೆಳಿಗ್ಗೆ 7 ಗಂಟೆಯಿಂದ ಧಾರವಾಡ ಜಿಲ್ಲೆಯಲ್ಲಿ ಬೃಹತ್ ಮೆಗಾ ಕೋವಿಡ್ ಲಸಿಕಾಕರಣ ಅಭಿಯಾನವನ್ನು ಆಯೋಜಿಸಲಾಗಿದ್ದು, 421 ಕೇಂದ್ರಗಳಲ್ಲಿ ಲಸಿಕೆ ನೀಡಲು ಕ್ರಮಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ನಗರ ಹಾಗೂ ಗ್ರಾಮೀಣ ಭಾಗದ ಪ್ರತಿ ಮನೆಮನೆಗೆ ಭೇಟಿ ನೀಡಿ, ಇಲ್ಲಿವರೆಗೂ ಲಸಿಕೆ ಪಡೆಯದಿರುವ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಪಡೆಯಬೇಕಾದ ಸ್ಥಳ ಹಾಗೂ ಸೆ.17 ದಿನಾಂಕ ಇರುವ ಸ್ಲೀಪ್ (ಚೀಟಿ) ನೀಡಲಾಗುತ್ತದೆ.
ಇದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಅಭಿಯಾನ ಯಶಸ್ವಿಗೊಳಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಕೊಂಡಿದೆ ಎಂದು ಅವರು ಹೇಳಿದರು.
ಈಗಾಗಲೇ ಕಳೆದ ಜೂನ್ 26 ರಂದು ಮತ್ತು ಅದಕ್ಕಿಂತ ಮೊದಲು ಕೋವಿಶೀಲ್ಡ್ ಲಸಿಕೆ ಪಡೆದವರು ಎರಡನೇ ಡೊಸ್ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಮತ್ತು ಕೋವ್ಯಾಕ್ಸಿನ್ ಪಡೆದು 28 ದಿನ ಪೂರೈಸಿರುವ ಎಲ್ಲರೂ ಲಸಿಕೆ ಪಡೆಯಬೇಕು.
ಸೆಪ್ಟಂಬರ್ 17 ರಂದು ಜಿಲ್ಲೆಯಲ್ಲಿ ಮೊದಲ ಡೋಸ್ ಹಾಗೂ ಅರ್ಹರಿರುವ ಪಲಾನುಭವಿಗಳಿಗೆ ಎರಡನೇ ಡೋಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಸಾರ್ವಜನಿಕರು ಭಾಗವಹಿಸಿ, ಲಸಿಕಾ ಅಭಿಯಾನ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ. ಅವರು ಮಾತನಾಡಿ, ಎಲ್ಲ ಇಲಾಖಾ ಮುಖ್ಯಸ್ಥರು ತಮ್ಮ ಕಚೇರಿ ಹಾಗೂ ತಾಲೂಕು, ಕ್ಷೇತ್ರಮಟ್ಟದ ಅಧಿಕಾರಿ, ಸಿಬ್ಬಂದಿ ತಪ್ಪದೇ ಲಸಿಕೆ ಪಡೆದಿರುವ ಕುರಿತು ಖಾತ್ರಿ ಪಡಿಸಿಕೊಳ್ಳಬೇಕು. ಲಸಿಕೆ ಪಡೆಯದ ಉಳಿದ ಸಿಬ್ಬಂದಿ ಸೆಪ್ಟೆಂಬರ್ 17 ರಂದು ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳುವಂತೆ ಕ್ರಮ ವಹಿಸಬೇಕು ಎಂದರು.
ಜಿಲ್ಲೆಯ 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ನಾಗರಿಕರು, ಸರ್ಕಾರಿ ಮತ್ತು ಖಾಸಗಿ ವಲಯದ ಎಲ್ಲ ನೌಕರರು ತಪ್ಪದೇ ಲಸಿಕೆ ಪಡೆಯುವಂತೆ ಕ್ರಮವಹಿಸುವುದು ನಮ್ಮೆಲ್ಲರ ಜವಾಬ್ದರಿಯಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ಮಾಧವ ಗಿತ್ತೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೆಶ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ನಿಗಮ, ಮಂಡಳಿಗಳ ಅಧಿಕಾರಿಗಳು ಭಾಗವಹಿಸಿದ್ದರು.
Kshetra Samachara
15/09/2021 02:42 pm