ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ ಟೆಸ್ಟಿಂಗ್ ಹೆಚ್ಚಳ ಮಾಡಿ: ಡಾ.ರವಿಕುಮಾರ

ಧಾರವಾಡ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕಠಿಣ ರೀತಿಯಲ್ಲಿ ಮುಂದುವರೆಸಬೇಕು. ಪಾಸಿಟಿವಿಟಿ ದರ ಕಡಿಮೆಯಾಗಿದೆ ಎಂದು ಉದಾಸೀನತೆ ತೋರದೇ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದ ಜನರಿಗೆ ದಂಡ ವಿಧಿಸಬೇಕು ಮತ್ತು ಕೋವಿಡ್ ಟೆಸ್ಟಿಂಗ್ ಹೆಚ್ಚಳಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರವಿಕುಮಾರ ಸುರಪುರ ಹೇಳಿದರು.

ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ಹಾಗೂ ಅತಿವೃಷ್ಟಿ ಹಾನಿಯ ಕುರಿತು ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಮಾತನಾಡಿದರು.

ನಗರ ಪ್ರದೇಶದಲ್ಲಿ ಮಹಾನಗರ ಪೊಲೀಸ್ ಮತ್ತು ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರು ಹಾಗೂ ಅಧಿಕಾರಿಗಳು ಕೋವಿಡ್ ನಿಯಂತ್ರಣಕ್ಕಾಗಿ ಹೆಚ್ಚು ಶ್ರಮಿಸಬೇಕು. ಮತ್ತು ಗ್ರಾಮೀಣ ಭಾಗದಲ್ಲಿ ಪಂಚಾಯತ್ ರಾಜ್ ಹಾಗೂ ಗ್ರಾಮೀಣ ಪೊಲೀಸರು ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಂತರ ಕಾಪಾಡುವ ಕುರಿತು ಜಾಗೃತಿ ಮೂಡಿಸಬೇಕು. ಉಲ್ಲಂಘಿಸುವವರಿಗೆ ದಂಡ ವಿಧಿಸಬೇಕೆಂದು ಅವರು ಹೇಳಿದರು.

ಮುಂಗಾರು ಹಂಗಾಮಿನಲ್ಲಿ ಅತಿಯಾದ ಮಳೆಯಿಂದಾಗಿ ಹಾನಿಯಾಗಿರುವ ಮನೆ, ಬೆಳೆಗಳಿಗೆ ಆದಷ್ಟು ಶೀಘ್ರದಲ್ಲಿ ಪರಿಹಾರ ಸಿಗುವಂತೆ ಕ್ರಮ ವಹಿಸಬೇಕು. ಮತ್ತು ಸಾರ್ವಜನಿಕ ಸ್ವತ್ತು, ರಸ್ತೆ, ಸೇತುವೆ ಹಾನಿಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ಅನುದಾನ ಬಿಡುಗಡೆಗೆ ಕ್ರಮ ವಹಿಸಬೇಕೆಂದು ಅವರು ಹೇಳಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಕಳೆದ ಜೂನ್ 1 ರಿಂದ ಆಗಸ್ಟ್ 16 ರವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅತಿವೃಷ್ಟಿಯಿಂದಾಗಿ 1,716 ಭಾಗಶಃ ಹಾನಿಯಾದ ಮತ್ತು 100 ತೀವೃತರ ಹಾನಿಯಾದ ಹಾಗೂ 39 ಪೂರ್ಣ ಹಾನಿಯಾದ ಮನೆಗಳಿವೆ. ಧಾರವಾಡ ತಾಲೂಕಿನಲ್ಲಿ 2 ಮಾನವ ಜೀವಹಾನಿ ಮತ್ತು ನವಲಗುಂದ ತಾಲೂಕಿನಲ್ಲಿ 23 ಜಾನುವಾರು ಜೀವಹಾನಿಯಾಗಿದ್ದು, ಮಾನವ ಜೀವಹಾನಿಗೆ ಪರಿಹಾರ ಧನ ವಿತರಿಸಲು ಚೆಕ್ ಸಿದ್ಧವಾಗಿದೆ. ಜಾನುವಾರು ಜೀವಹಾನಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ.

ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 23,238.98 ಹೆಕ್ಟೇರ್ ಕೃಷಿ ಬೆಳೆ ಹಾಗೂ 276.40 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಜುಲೈ-2021 ರ ಅತೀವೃಷ್ಟಿಯಿಂದ ಜಿಲ್ಲೆಯ 25 ಗ್ರಾಮಗಳ 1,052 ಕುಟುಂಬಗಳ ಪರಿಣಾಮವಾಗಿದೆ ಎಂದು ಅವರು ತಿಳಿಸಿದರು.

ಮುಂಗಾರು 2020-21ನೇ ಸಾಲಿನ ಬೆಳೆಹಾನಿಗೆ ಸಂಬಂಧಿಸಿದಂತೆ, ಈಗಾಗಲೇ 1,06,895 ಜನ ಫಲಾನುಭವಿಗಳಿಗೆ ಒಟ್ಟು 94.34 ಕೋಟಿ ರೂ.ಗಳ ಪರಿಹಾರಧನ ಸಂದಾಯ ಮಾಡಲಾಗಿದೆ ಎಂದು ಅವರು ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, 3ನೇ ಅಲೆಯ ಹಾನಿ ತಪ್ಪಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಸಿಕಾಕರಣ ಉತ್ತಮವಾಗಿದ್ದು, ಇಲ್ಲಿಯವರೆಗೆ 709170 ಜನರು ಮೊದಲನೇ ಡೋಸ್ ಹಾಗೂ 201148 ಜನರು ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಒಟ್ಟು ಇಲ್ಲಿಯವರೆಗೆ ಮೊದಲ ಮತ್ತು ಎರಡನೇ ಡೋಸ್ ಸೇರಿ 910318 ಜನರು ಲಸಿಕೆ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಸುಶೀಲಾ ಬಿ., ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ, ಐಎಎಸ್ ಪ್ರೋಬೇಷನರಿ ಅಧಿಕಾರಿ ಮಾಧವ ಗಿತ್ತೆ ಇದ್ದರು.

Edited By : PublicNext Desk
Kshetra Samachara

Kshetra Samachara

16/08/2021 09:35 pm

Cinque Terre

62.01 K

Cinque Terre

6

ಸಂಬಂಧಿತ ಸುದ್ದಿ