ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪಹಣಿ ಪತ್ರಿಕೆಯಲ್ಲಿ ಇಲಾಖೆ ಹೆಸರು!; ಕಂಗಾಲಾದ ಅನ್ನದಾತರು

ಧಾರವಾಡ: ಅವರೆಲ್ಲ ಜಮೀನು ನಂಬಿ ಜೀವನ ಸಾಗಿಸುತ್ತಿರುವ ರೈತರು... ತಮಗಿರುವ ಅಷ್ಟೋ ಇಷ್ಟೋ ಭೂಮಿಯಲ್ಲಿ ಸುಖ ಕಂಡವರು. ಆದರೆ, ಇದ್ದ ಭೂಮಿಯನ್ನು ಹೇಳದೇ ಕೇಳದೇ ಯಾರೋ ತಮ್ಮ ಹೆಸರಿಗೆ ಮಾಡಿಕೊಂಡರೆ ಅವರ ಪಾಡೇನು? ಈ ಪ್ರಶ್ನೆ ಇದೀಗ ಉದ್ಭವಿಸಿದ್ದು, ಇಲಾಖೆಯ ಈ ಯಡವಟ್ಟಿನಿಂದಾಗಿ ಧಾರವಾಡ ಜಿಲ್ಲೆಯ ಅನೇಕ ಊರುಗಳ ಅನ್ನದಾತರು ಇದೀಗ ಕಂಗಾಲಾಗುವಂತಾಗಿದೆ.

ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಹುಬ್ಬಳ್ಳಿ ತಾಲೂಕಿನಲ್ಲಿ ಮಲಪ್ರಭಾ ಬಲದಂಡೆ ಕಾಲುವೆ ಹಾದು ಹೋಗುತ್ತದೆ. ಇದಕ್ಕೆ ಈ ಮೊದಲು ರೈತರ ಜಮೀನನ್ನು ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಮೊದಲು ಜಮೀನು ಸ್ವಾಧೀನಪಡಿಸಿಕೊಂಡಾಗ ಇಲಾಖೆಯ ಹೆಸರು ಪಹಣಿಯಲ್ಲಿ ನಮೂದಾಗಿತ್ತು. ಅದಕ್ಕೆ ರೈತರು ಪರಿಹಾರ ಕೂಡ ಪಡೆದಿದ್ದರು. ಈಗ ಮತ್ತೆ ನೀರಾವರಿ ಇಲಾಖೆ, ಪಿಡಬ್ಲುಡಿ ಇಲಾಖೆ ವತಿಯಿಂದ ಹತ್ತತ್ತು ಗುಂಟೆ ಜಾಗ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಅಂತಾ ಪಹಣಿ ಪತ್ರಿಕೆಯಲ್ಲಿ ಇಲಾಖೆ ಹೆಸರು ನಮೂದಿಸಲಾಗಿದೆ. ಈ ಹೆಸರು ನೋಡಿ ರೈತರು ಇದೀಗ ಕಂಗಾಲಾಗಿದ್ದಾರೆ. ಇದರಿಂದಾಗಿ ಅದೆಷ್ಟೋ ರೈತರಿಗೆ ಬೆಳೆ ಸಾಲ ಕೂಡ ಸಿಕ್ಕಿಲ್ಲ.

ಇಲಾಖೆಯಿಂದ ಈ ರೈತರಿಗೆ ಯಾವುದೇ ನೋಟಿಸ್ ಹಾಗೂ ಸೂಚನೆಯನ್ನೂ ಕೊಡದೇ ನೀರಾವರಿ ಇಲಾಖೆ ರೈತರ ಪಹಣಿ ಪತ್ರಿಕೆಯಲ್ಲಿ ಇಲಾಖೆಯ ಹೆಸರು ನಮೂದಿಸಿ ಹತ್ತು ಗುಂಟೆ ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದಾಗಿ ತಿಳಿಸಿದೆ. ಈ ಹಿಂದೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ಇಲಾಖೆ ಬೇಕಾದರೆ ಬೇರೆ ಪಹಣಿ ಪತ್ರಿಕೆ ಮಾಡಿಕೊಳ್ಳಲಿ. ಈಗ ಈ ತಪ್ಪು ಮಾಡಿದ್ದೇಕೆ ಎಂಬುದು ರೈತರ ಪ್ರಶ್ನೆಯಾಗಿದೆ. ಇದು 4 ಜಿಲ್ಲೆ 11 ತಾಲೂಕಿನ ರೈತರ ಸಮಸ್ಯೆಯಾಗಿದೆ.

ಈ ಸಮಸ್ಯೆಯಿಂದಾಗಿ ರೈತರು ಭಯದಲ್ಲಿದ್ದು, ನೀರಾವರಿ ಇಲಾಖೆ ತನ್ನ ಹೆಸರನ್ನು ಭೂ ಸ್ವಾಧೀನಪಡಿಸಿಕೊಳ್ಳಲು ರೈತರ ಪಹಣಿಯಲ್ಲಿ ನಮೂದು ಮಾಡಿದೆಯೋ ಅಥವಾ ತಪ್ಪಿನಿಂದ ಇದು ಆಗಿದೆಯೋ ಎಂದು ಮೊದಲು ಸ್ಪಷ್ಟಪಡಿಸಬೇಕಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್ ಧಾರವಾಡ

Edited By : Shivu K
Kshetra Samachara

Kshetra Samachara

26/07/2022 08:26 pm

Cinque Terre

74.42 K

Cinque Terre

4

ಸಂಬಂಧಿತ ಸುದ್ದಿ