ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಸ್, ನಿಲ್ದಾಣದಲ್ಲಿ ಉಗುಳಿದವರಿಂದ 30 ಸಾವಿರ ರೂ. ದಂಡ ವಸೂಲಿ

ಹುಬ್ಬಳ್ಳಿ: ಬಸ್ ಮತ್ತು ಬಸ್ ನಿಲ್ದಾಣಗಳಲ್ಲಿ ಎಲೆ ಅಡಿಕೆ, ತಂಬಾಕು ಹಾಗೂ ಗುಟ್ಕಾ ತಿಂದು ಉಗುಳುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸುವ ಮೂಲಕ ಜಾಗೃತಿ ಮೂಡಿಸಲು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುಂದಾಗಿದೆ.

ಸರ್ಕಾರದ ನಿರ್ದೇಶನ ಗಳ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಎಲೆ ಅಡಿಕೆ, ತಂಬಾಕು, ಗುಟ್ಕಾ ಸೇವನೆ ಹಾಗೂ ಧೂಮಪಾನ ನಿಷೇಧಿಸಲಾಗಿದೆ. ಬಸ್ ಮತ್ತು ನಿಲ್ದಾಣಗಳಲ್ಲಿ ಇದನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಹಲವಾರು ಉಪ ಕ್ರಮಗಳನ್ನು ಜಾರಿಗೊಳಿಗಸಲಾಗಿದೆ. ಎಲ್ಲಾ ರೀತಿಯ ಜಾಗೃತಿ, ಮುನ್ನೆಚ್ಚರಿಕೆ ಕ್ರಮಗಳ ಹೊರತಾಗಿಯೂ ಎಲ್ಲೆಂದರಲ್ಲಿ ಉಗುಳುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಲಾಗುತ್ತಿದೆ. ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯ ಬಸ್ ನಿಲ್ದಾಣಗಳಲ್ಲಿ ಜುಲೈ ತಿಂಗಳಲ್ಲಿ 10,600 ರೂ., ಆಗಸ್ಟ್‌ನಲ್ಲಿ 15,800 ರೂ. ಹಾಗೂ ಈ ತಿಂಗಳು ಮೊದಲ ವಾರದಲ್ಲಿ 4,200 ರೂ. ಸೇರಿ ಇದುವರೆಗೆ 30,600 ರೂ. ದಂಡ ವಸೂಲು ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ 375 ಬಸ್ ಗಳಲ್ಲಿ ಪ್ರತಿ ದಿನ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಪ್ರಯಾಣ ಮಾಡುತ್ತಾರೆ. ನಗರದ ಹೊಸೂರು, ಗೋಕುಲ ರಸ್ತೆ ಬಸ್ ನಿಲ್ದಾಣ, ತಡಸ, ಕಲಘಟಗಿ, ಕುಂದಗೋಳ, ನವಲಗುಂದ ಹಾಗೂ ಅಣ್ಣಿಗೇರಿ ಮತ್ತಿತರ ಪ್ರಮುಖ ಬಸ್ ನಿಲ್ದಾಣಗಳಿಗೆ ನಿತ್ಯ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಕೆಲವರು ಎಲೆ ಅಡಿಕೆ ತಂಬಾಕು ಗುಟ್ಕಾ ಜಗಿಯುವುದು ಹಾಗೂ ಬಸ್ ಮತ್ತು ನಿಲ್ದಾಣಗಳಲ್ಲಿ ಎಲ್ಲೆಂದರಲ್ಲಿ ಉಗುಳುವ ಹವ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ.ಅದರಿಂದ ಪರಿಸರಕ್ಕೆ ಹಾನಿ, ಅಕ್ಕಪಕ್ಕದವರಿಗೆ ಮುಜುಗರ ಮತ್ತು ಕೋವಿಡ್ ನಂತಹ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.

ಬಸ್ ಮತ್ತು ನಿಲ್ದಾಣದಲ್ಲಿ ಎಲೆ ಅಡಿಕೆ,ತಂಬಾಕು, ಗುಟ್ಕಾ ಸೇವನೆ, ಧೂಮಪಾನ ನಿಷೇಧದ ಕುರಿತು ಸಾರ್ವಜನಿಕರ ಮಾಹಿತಿಗಾಗಿ ಬಸ್ ಮತ್ತು ನಿಲ್ದಾಣಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.ಧ್ವನಿವರ್ಧಕದ ಮೂಲಕ ಜಾಗೃತಿ ಸಂದೇಶ ಬಿತ್ತರಿಸಲಾಗುತ್ತಿದೆ. ಬಸ್ ಟಿಕೆಟ್ ನಲ್ಲಿ ಸಂದೇಶಗಳನ್ನು ಮುದ್ರಿಸಲಾಗುತ್ತಿದೆ.ಈ ಬಗ್ಗೆ ನಿಲ್ದಾಣದ ಮೇಲ್ವಿಚಾರಕ ಸಿಬ್ಬಂದಿಗಳು ಸಹಾ ಮೌಖಿಕ ತಿಳುವಳಿಕೆ ನೀಡುತ್ತಾರೆ.ಇವೆಲ್ಲವುಗಳನ್ನು ನಿರ್ಲಕ್ಷಿಸಿ ಬಸ್ ಮತ್ತು ನಿಲ್ದಾಣದಲ್ಲಿ ಉಗುಳುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಲಾಗುತ್ತಿದೆ.

ದಶಕಗಳ ಹಿಂದೆ ಬಸ್ ಮತ್ತು ನಿಲ್ದಾಣಗಳಲ್ಲಿ ಧೂಮಪಾನ ಸರ್ವೇ ಸಾಮಾನ್ಯವಾಗಿತ್ತು. ನಿರಂತರ ಜಾಗೃತಿ, ಹಲವಾರು ಕಠಿಣ ಕ್ರಮಗಳು ಹಾಗೂ ಸಾರ್ವಜನಿಕರ ಸಹಕಾರ ದೊಂದಿಗೆ ಅದನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ.ಅದೇ ಮಾದರಿಯಲ್ಲಿ ಈ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಮೂಹ ಆರೋಗ್ಯ ಹಾಗೂ ಪರಿಸರ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕ ಪ್ರಯಾಣಿಕರು ಸಂಸ್ಥೆಯೊಂದಿಗೆ ಸಹಕರಿಸಲು ಅವರು ಮನವಿ ಮಾಡಿದ್ದಾರೆ.

Edited By : Vijay Kumar
Kshetra Samachara

Kshetra Samachara

13/09/2021 07:24 pm

Cinque Terre

14.02 K

Cinque Terre

6

ಸಂಬಂಧಿತ ಸುದ್ದಿ