ಹುಬ್ಬಳ್ಳಿ : ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಚತಾ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಚತಾ ಕಾರ್ಮಿಕರು, ಲೋಡರ್ಸ್ - ಕ್ಲೀನರ್ಸ್, ಸಹಾಯಕರು, ಕಸದ ವಾಹನ ಚಾಲಕರನ್ನು ಏಕಕಾಲಕ್ಕೆ ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಜುಲೈ 1 ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ಧಿಷ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ ಹೋರಾಟ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರಕಾರ್ಮಿಕರ ಬದುಕುವ ಸ್ಥಿತಿ ಶೋಚನೀಯವಾಗಿದೆ. ಪೌರಕಾರ್ಮಿಕರ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ 2017-18 ರ ಅಂದಿನ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಗುತ್ತಿಗೆ ಪದ್ದತಿ ರದ್ದುಪಡಿಸಿ ಎಲ್ಲಾ ಸ್ವಚ್ಚತಾ ಕಾರ್ಮಿಕರನ್ನು ಖಾಯಂಗೊಳಿಸಲು ನಿರ್ಣಯ ಮಾಡಿತು.
ಆದರೆ ನಗರಾಭಿವೃದ್ಧಿ ಇಲಾಖೆ ಮತ್ತು ಪೌರಢಳಿತ ನಿರ್ದೇಶನಾಲಯದ ದಲಿತ ಪೌರಕಾರ್ಮಿಕರ ವಿರೋಧಿ ಅಧಿಕಾರಿಗಳು ಸಚಿವ ಸಂಪುಟದ ನಿರ್ಣಯವನ್ನು ಯತ್ತಾವತ್ತಾಗಿ ಅನುಷ್ಠಾನಗೊಳಿಸದೇ ಪೌರಕಾರ್ಮಿಕರ ವಿಶೇಷ ನೇಮಕಾತಿ ನಿಯಮಗಳನ್ನು ಜಾರಿಗೆ ತರುವ ಮೂಲಕ ಪೌರಕಾರ್ಮಿಕರ ಬದುಕನ್ನು ನಾಶ ಮಾಡಿದ್ದಾರೆ.
ಈ ದಿಸೆಯಲ್ಲಿ ರಾಜ್ಯ ನಗರಸಭೆ , ಪುರಸಭೆ ಮಹಾನಗರ ಪಾಲಿಕೆ ಪೌರಕಾರ್ಮಿಕರ ಮಹಾಸಂಘದ ರಾಜ್ಯ ಸಮಿತಿ ಬೆಂಗಳೂರು ಹಾಗೂ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘ ಧಾರವಾಡ ಜಿಲ್ಲಾ ಸಮಿತಿ ಜಂಟಿಯಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
Kshetra Samachara
10/06/2022 01:25 pm