ಧಾರವಾಡ: ಕರ್ನಾಟಕ ಸರ್ಕಾರವು ಮಾರ್ಚ್ 11, 2016 ರಲ್ಲಿ ಅಧಿಸೂಚನೆ ಹೊರಡಿಸಿ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಿದೆ. ಈ ನಿಯಮವನ್ನು ಪಾಲಿಸದ ಕೈಗಾರಿಕೆ ಹಾಗೂ ಅಂಗಡಿ, ಮುಂಗ್ಗಟ್ಟುಗಳನ್ನು ಮುಚ್ಚುವ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಹೊರಡಿಸಿದ ಮಾರ್ಗಸೂಚಿಯ ಪ್ರಕಾರ ಪರಿಸರ ಪರಿಹಾರವನ್ನು ಪ್ರತಿ ಟನ್‍ಗೆ 5 ಸಾವಿರ ರೂಪಾಯಿಯಂತೆ ದಂಡ ವಿಧಿಸಿ ಆಕರಿಸಲಾಗುತ್ತದೆ ಮತ್ತು ಕಠಿಣ ಕ್ರಮಗಳನ್ನು ಜರುಗಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಶೋಭಾ ಪೋಳ್ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸರ್ಕಾರವು 2016 ರಲ್ಲಿ ಅಧಿಸೂಚನೆ ಹೊರಡಿಸಿ ನಿಷೇಧಿಸಿದೆ. ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳೆಂದರೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಬ್ಯಾನರ್‌ಗಳು, ಪ್ಲಾಸ್ಟಿಕ್ ಬಂಟಿಂಗ್ಸ್, ಪ್ಲಾಸ್ಟಿಕ್ ಫ್ಲೆಕ್ಸ್, ಪ್ಲಾಸ್ಟಿಕ್ ಪ್ಲೇಟಗಳು, ಪ್ಲಾಸ್ಟಿಕ್ ಧ್ವಜಗಳು, ಪ್ಲಾಸ್ಟಿಕ್ ಕಪ್‍ಗಳು, ಪ್ಲಾಸ್ಟಿಕ್ ಸ್ಪೂನ್‍ಗಳು, ಅಂಟಿಕೊಳ್ಳುವ ಫಿಲ್ಮ್‌ಗಳು, ಎಲ್ಲಾ ದಪ್ಪದ ಡೈನಿಂಗ್ ಟೇಬಲ್‍ನಲ್ಲಿ ಹರಡಲು ಬಳಸುವ ಪ್ಲಾಸ್ಟಿಕ್ ಹಾಳೆಗಳು, ಸ್ಟ್ರಾಗಳು, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳು ಸೇರಿವೆ.
ಕರ್ನಾಟಕ ಸರ್ಕಾರದ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಜೊತೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮಗಳು 2021 ರಲ್ಲಿ ಹೆಚ್ಚುವರಿ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು 1ನೇ ಜುಲೈ 2022 ರಿಂದ ಜಾರಿಗೆ ಬರುವಂತೆ ನಿಷೇಧಿಸಿ, ಅಧಿಸೂಚನೆ ಹೊರಡಿಸಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ರ ಪ್ರಕಾರ (ತಿದ್ದುಪಡಿಯಂತೆ), “ಪಾಲಿಸ್ಟ್ರೆರೀನ್ ಮತ್ತು ವಿಸ್ತರಿತ ಪಾಲಿಸ್ಟ್ರೆರೀನ್ ಸೇರಿದಂತೆ ಏಕ ಬಳಕೆಯ ಪ್ಲಾಸ್ಟಿಕ್ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಜುಲೈ 1, 2022 ರಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.
ಪ್ಲಾಸ್ಟಿಕ್ ಸ್ಟಿಕ್‍ಗಳೊಂದಿಗೆ ಇಯರ್ ಬಡ್‍ಗಳು, ಬಲೂನ್‍ಗಳಿಗೆ ಬಳಸುವ ಪ್ಲಾಸ್ಟಿಕ್ ಸ್ಟಿಕ್‍ಗಳು, ಪ್ಲಾಸ್ಟಿಕ್ ಧ್ವಜಗಳು, ಪ್ಲಾಸ್ಟಿಕ್ ಕ್ಯಾಂಡಿ ಸ್ಟಿಕ್‍ಗಳು, ಪ್ಲಾಸ್ಟಿಕ್ ಐಸ್‍ಕ್ರೀಮ್ ಸ್ಟಿಕ್‍ಗಳು, ಅಲಂಕಾರಕ್ಕಾಗಿ ಬಳಸುವ ಪಾಲಿಸ್ಟ್ರೆರೀನ್ (ಥರ್ಮಾಕೋಲ್), ಪ್ಲಾಸ್ಟಿಕ್ ಪ್ಲೇಟ್‍ಗಳು, ಪ್ಲಾಸ್ಟಿಕ್ ಕಪ್‍ಗಳು ಮತ್ತು ಲೋಟಗಳು, ಫೋರ್ಕ್‍ಗಳು, ಪ್ಲಾಸ್ಟಿಕ್ ಚಮಚಗಳು, ಪ್ಲಾಸ್ಟಿಕ್ ಚಾಕುಗಳು, ಪ್ಲಾಸ್ಟಿಕ್ ಟ್ರೇಗಳಂತಹ ಕಟ್ಲರಿಗಳು, ಸ್ವೀಟ್ ಬಾಕ್ಸ್‌ಗಳ ಸುತ್ತ ಸುತ್ತುವ ಅಥವಾ ಪ್ಯಾಕಿಂಗ್ ಫಿಲ್ಮಗಳು, ಆಮಂತ್ರಣ ಪತ್ರಗಳು ಮತ್ತು ಸಿಗರೇಟ್ ಪ್ಯಾಕೆಟ್‍ಗಳು, 100 ಮೈಕ್ರಾನ್ ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್‌ಗಳು ಸೇರಿದಂತೆ ಈ ಎಲ್ಲ ಉತ್ಪನ್ನಗಳನ್ನು ನಿಷೇಧಿಸಲಾಗಿದ್ದು, ಈ ಎಲ್ಲಾ ವಸ್ತುಗಳ ಉತ್ಪಾದಕರು, ದಾಸ್ತಾನುದಾರರು, ಚಿಲ್ಲರೆ ವ್ಯಾಪಾರಿಗಳು, ಅಂಗಡಿ ಮಾಲೀಕರುಗಳು, ಇ-ಕಾಮರ್ಸ್ ಕಂಪೆನಿಗಳು, ಬೀದಿ ವ್ಯಾಪಾರಿಗಳು, ವಾಣಿಜ್ಯ ಸಂಸ್ಥೆಗಳಾದ ಮಾಲ್‍ಗಳು, ಮಾರುಕಟ್ಟೆ ಸ್ಥಳ, ಶಾಪಿಂಗ್ ಕೇಂದ್ರಗಳು, ಚಿತ್ರಮಂದಿರಗಳು, ಪ್ರವಾಸೋದ್ಯಮ ಸ್ಥಳಗಳು, ಶಾಲೆಗಳು, ಕಾಲೇಜುಗಳು, ಕಚೇರಿ ಸಂಕೀರ್ಣಗಳು, ಆಸ್ಪತ್ರೆಗಳು ಹಾಗೂ ಇತರೆ ಸಂಸ್ಥೆಗಳು, ಸಾಮಾನ್ಯ ಸಾರ್ವಜನಿಕರಿಗೆ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಲ್ಲಿಸುವಂತೆ ತಿಳಿಸಲು ಈ ಸೂಚನೆಯನ್ನು ಪ್ರಕಟಣೆಯ ಮೂಲಕ ನೀಡಲಾಗಿದೆ.
ಜೂನ್ 30, 2022 ರೊಳಗೆ ಈ ಪ್ರಕಟಣೆಯಲ್ಲಿ ತಿಳಿಸಲಾದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಶೂನ್ಯ ದಾಸ್ತಾನು (ಸಂಗ್ರಹಣೆ ಇಲ್ಲದಿರುವುದನ್ನು)ಗಳನ್ನು ಖಚಿತಪಡಿಸಿಕೊಳ್ಳಲು ಸಂಬಂಧಿಸಿದ ಘಟಕಗಳಿಂದ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು. ಎಲ್ಲ ಇ-ಕಾಮರ್ಸ್ ಕಂಪೆನಿಗಳ ವೆಬ್‍ಸೈಟ್‍ನಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ (ಎಸ್‍ಯುಪಿ)ವಸ್ತುಗಳ ಮಾರಾಟ ಮತ್ತು ಪ್ರದರ್ಶನ, ಜಾಹೀರಾತುಗಳನ್ನು ಕೂಡ ಜುಲ್ಲೈ 1, 2022 ರಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.
Kshetra Samachara
03/06/2022 07:15 pm