ಧಾರವಾಡ: ಧಾರವಾಡ ಸಮೀಪದ ನವಲೂರಿನಲ್ಲಿರುವ ಸ್ಮಶಾನವನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ನವಲೂರು ಗ್ರಾಮಸ್ಥರು ಮಹಾವೀರ ಜೈನ್ ಹಾಗೂ ಪಾಲಿಕೆ ಸದಸ್ಯ ಡಾ.ಮಯೂರ ಮೋರೆ ನೇತೃತ್ವದಲ್ಲಿ ಆ ಸ್ಮಶಾನದಲ್ಲೇ ಧರಣಿ ಆರಂಭಿಸಿದ್ದಾರೆ.
ಸುಮಾರು 30 ಸಾವಿರ ಜನಸಂಖ್ಯೆ ಇರುವ ನವಲೂರು ಗ್ರಾಮಕ್ಕೆ ಸುಸಜ್ಜಿತ ರುದ್ರಭೂಮಿ ಇಲ್ಲದಾಗಿದೆ. 12 ಎಕರೆ ಪ್ರದೇಶದಲ್ಲಿ ಈ ರುದ್ರಭೂಮಿ ಇದ್ದು, ಅದರ ಅಭಿವೃದ್ಧಿಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ಗ್ರಾಮದ ಜನರ ಬೇಡಿಕೆಗೆ ಸ್ಪಂದಿಸಿ 2017ರಲ್ಲಿ ಅಂದು ಸಚಿವರಾಗಿದ್ದ ಎಚ್.ಕೆ.ಪಾಟೀಲ ಹಾಗೂ ರುದ್ರಪ್ಪ ಲಮಾಣಿ ಅವರು ಗ್ರಾಮಕ್ಕೆ ಅಗತ್ಯವಾಗಿ ಬೇಕಿರುವ ರುದ್ರಭೂಮಿಗೆ ಜಾಗ ಮಂಜೂರು ಮಾಡಿದ್ದರು. ಬಳಿಕ 50 ಲಕ್ಷ ರೂಪಾಯಿ ಅನುದಾನವನ್ನೂ ಬಿಡುಗಡೆ ಮಾಡಿದ್ದರು.
ಸ್ಮಶಾನ ಅಭಿವೃದ್ಧಿಗೆ ಗುತ್ತಿಗೆಯನ್ನೂ ನೀಡಿ ಕಾಮಗಾರಿ ಆರಂಭಿಸಬೇಕಿತ್ತು. ಆದರೆ, ಎಂಜಿನಿಯರ್ಗಳು ಸ್ಥಳದ ಗಡಿಯನ್ನು ಗುರುತಿಸದ ಕಾರಣ ಕಾಮಗಾರಿ ಆರಂಭಗೊಂಡಿಲ್ಲ. ಸ್ಥಳೀಯ ಶಾಸಕರ ರಾಜಕಾರಣದಿಂದ ಅಧಿಕಾರಿಗಳು ಕಾಮಗಾರಿ ಆರಂಭಿಸಲು ವಿಳಂಬ ಮಾಡುತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಧೋರಣೆಯನ್ನು ಖಂಡಿಸಿ ಧರಣಿ ಆರಂಭಿಸಿದ್ದು, 3-4 ದಿನಗಳಲ್ಲಿ ಕಾಮಗಾರಿ ಆರಂಭಿಸದಿದ್ದರೆ ರಸ್ತೆ ತಡೆ, ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಧರಣಿ ನೇತೃತ್ವ ವಹಿಸಿರುವ ಗ್ರಾಮದ ಹಿರಿಯ ಮಹಾವೀರ ಜೈನ್ ಎಚ್ಚರಿಸಿದ್ದಾರೆ.
Kshetra Samachara
02/08/2022 03:44 pm