ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಒಂದಾಗಿರುವ ಗೋಕುಲ ರಸ್ತೆಯ ಅಕ್ಷಯಪಾರ್ಕ್ ನಿವಾಸಿಗಳ ಗೋಳು ಹೇಳತೀರದಾಗಿದೆ. ಅವ್ಯವಸ್ಥೆಯಿಂದ ಇಲ್ಲಿನ ಜನರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಜೀವನ ನಡೆಸುವಂತಾಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು ಅಂತ ಹೇಳ್ತಿವಿ ನೋಡಿ.
ಹೀಗೆ ಎಲ್ಲೆಂದರಲ್ಲಿ ಗುಂಪು ಗುಂಪಾಗಿ ಬಿದ್ದಿರುವ ತ್ಯಾಜ್ಯ. ಸಂಗಹಿಸಿದ ಕಸವನ್ನು ವಿಲೇವಾರಿ ಮಾಡದೇ ಉಳಿದಿರುವ ಕಸದ ಡಬ್ಬಿಗಳು. ಅಲ್ಲದೇ ಎಲ್ಲೆಂದರಲ್ಲಿ ಪಾರ್ಕ್ ಮಾಡಿರುವ ವಾಹನಗಳು. ಈ ಎಲ್ಲ ಅವ್ಯವಸ್ಥೆಯ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿಯ ಗೋಕುಲ ರಸ್ತೆಯ ಅಕ್ಷಯಪಾರ್ಕ್. ಹೌದು. ಇಲ್ಲಿ ಮಕ್ಕಳಿಗೆ, ವಯೋವೃದ್ಧರಿಗೆ ಹಾಗೂ ಇಲ್ಲಿನ ನಿವಾಸಿಗಳಿಗೆ ವಾಯುವಿಹಾರಕ್ಕೆ ಹಾಗೂ ವಿಶ್ರಾಂತಿಗಾಗಿ ಉದ್ಯಾನವನ ನಿರ್ಮಾಣ ಮಾಡಲು ಜಾಗೆಯನ್ನು ಬಿಡಲಾಗಿದೆ. ಆದರೆ ಈ ಜಾಗೆ ಈಗ ತ್ಯಾಜ್ಯ ಸಂಗ್ರಹಣಾ ಘಟಕ ಹಾಗೂ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ. ಸುಮಾರು ವರ್ಷಗಳಿಂದ ಇಲ್ಲಿನ ಜನರು ಮಹಾನಗರ ಪಾಲಿಕೆಗೆ ಕರ ಪಾವತಿ ಮಾಡುತ್ತಿದ್ದಾರೆ. ಆದರೆ ಇದುವರೆಗೂ ಅಕ್ಷಯಪಾರ್ಕ್ ಮಾತ್ರ ಪಾಲಿಕೆಗೆ ಹಸ್ತಾಂತರವಾಗಿಲ್ಲವಂತೆ. ಇದರಿಂದ ಮೂಲಭೂತ ಸೌಕರ್ಯಗಳ ವಂಚನೆಯಿಂದ ನಾವೆಲ್ಲರೂ ಜೀವನ ಸಾಗಿಸಬೇಕು ಅಂತಿದ್ದಾರೆ ಇಲ್ಲಿನ ಜನರು.
ಇನ್ನೂ ಈಗಾಗಲೇ ಸಾಕಷ್ಟು ಅವ್ಯವಸ್ಥೆಯಿಂದ ಅಕ್ಷಯಪಾರ್ಕ್ ಕಳೆಗೆ ಕುಂದು ಬಂದಿದೆ. ಅಲ್ಲದೆ ಇಲ್ಲಿರುವ ಅವೈಜ್ಞಾನಿಕ ಕೇಬಲ್ ಕನೆಕ್ಷನ್ ನಿಂದ ಯಾವ ಸಮಯದಲ್ಲಿ ಏನಾಗುತ್ತದೆಯೋ ಎಂಬುವಂತ ಆತಂಕದಲ್ಲಿಯೇ ಜನರು ಜೀವನ ನಡೆಸುತ್ತಿದ್ದಾರೆ. ಈಗಾಗಲೇ ಉದ್ಯಾನವನದ ನಿರ್ಮಾಣಕ್ಕೆ 40ಲಕ್ಷಕ್ಕೂ ಅಧಿಕ ಹಣವನ್ನು ಸರ್ಕಾರದಿಂದ ಬಿಡುಗಡೆ ಕೂಡ ಮಾಡಲಾಗಿದೆಯಂತೆ ಹೀಗಿದ್ದರೂ ಇನ್ನೂ ಕೂಡ ಈ ಉದ್ಯಾನವನ ಮಾತ್ರ ಸುವ್ಯವಸ್ಥಿತ ರೀತಿಗೆ ಬರುತ್ತಿಲ್ಲ ಎಂಬುವುದು ಇಲ್ಲಿನ ಜನರ ಮಾತು.
ಒಟ್ಟಿನಲ್ಲಿ ಅಕ್ಷಯಪಾರ್ಕ್ ಸಮಸ್ಯೆಗಳಿಂದ ಜನರು ಬೇಸತ್ತು ಪಾಲಿಕೆಗೆ, ಜಿಲ್ಲಾಡಳಿತಕ್ಕೆ ಹಾಗೂ ಇಲ್ಲಿನ ಸಮಸ್ಯೆ ಬಗೆಹರಿಸುವಂತೆ ಹು-ಧಾ ಪೊಲೀಸ್ ಆಯುಕ್ತರಿಗೆ ಹಾಗೂ ಗೋಕುಲ ಪೊಲೀಸ್ ಠಾಣೆಗೂ ದೂರನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಂಡು ಇಲ್ಲಿನ ಅವ್ಯವಸ್ಥೆಗೆ ಪರಿಹಾರ ಕಲ್ಪಿಸಬೇಕಿದೆ.
Kshetra Samachara
15/06/2022 04:40 pm