ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಣ್ಣು ಕುಕ್ಕುವಂಗ ಆಗೇತ್ರಿ ನಮ್ಮ ಧಾರವಾಡ ರೈಲ್ವೆ ಸ್ಟೇಷನ್

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ನೈಋತ್ಯ ರೈಲ್ವೆ ವಿಭಾಗದ ಪ್ರಮುಖ ನಿಲ್ದಾಣಗಳಲ್ಲೊಂದಾದ ಧಾರವಾಡ ರೈಲು ನಿಲ್ದಾಣಕ್ಕೆ ಇದೀಗ ವಿಶೇಷ ಕಳೆ ಬಂದಿದೆ. ಹಳೆಯ ಉಡುಗೆ ಕಳಚಿ ಹೊಸತನವನ್ನುಟ್ಟು ರೈಲು ನಿಲ್ದಾಣ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ. 1936ರಲ್ಲಿ ಅಂದಿನ ಮದ್ರಾಸ್ ದಕ್ಷಿಣ ಮರಾಠಾ ರೈಲ್ವೆ (ಎಂಎಸ್‌ಎಂಆರ್) ವತಿಯಿಂದ ಧಾರವಾಡದಲ್ಲಿ ಈ ರೈಲು ನಿಲ್ದಾಣ ನಿರ್ಮಿಸಲಾಗಿತ್ತು. ಗಡಿಯಾರ, ಕೆಂಪು ಬಣ್ಣ, ಹೀಗೆ ತನ್ನದೇ ಆದ ವಿಶೇಷತೆಗಳಿಂದ ಕೂಡಿದ್ದ ಈ ಕಟ್ಟಡ ಇದೀಗ ಆಧುನಿಕ ವಿನ್ಯಾಸದ ಅಭಿವೃದ್ಧಿಯಿಂದ ಕಣ್ಣು ಕುಕ್ಕುವಂತಾಗಿದೆ.

ವರಕವಿ ಡಾ.ದ.ರಾ. ಬೇಂದ್ರೆ, ರಾಷ್ಟ್ರ ಕವಿ ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ, ಯು.ಆರ್.ಅನಂತಮೂರ್ತಿ, ಗಿರೀಶ ಕಾರ್ನಾಡರ ಚಿತ್ರಗಳು ರೈಲು

ನಿಲ್ದಾಣದ ಗೋಡೆಗಳಲ್ಲಿ ರಾರಾಜಿಸುತ್ತಿದ್ದು, ಕನ್ನಡ ಪ್ರೇಮಿಗಳು ಒಳಗೊಳಗೇ ಖುಷಿಪಡುವಂತಾಗಿದೆ. ಹೈಟೆಕ್ ಸ್ಪರ್ಶದಿಂದ ಧಾರವಾಡ ರೈಲು ನಿಲ್ದಾಣ ಪ್ರಯಾಣಿಕರನ್ನು ಕೈಬೀಸಿ ಕರೆಯುವಂತಾಗಿದೆ.

ದಕ್ಷಿಣ ಭಾರತದ ವಿವಿಧ ನಾಟ್ಯಗಳು ಮತ್ತು ನಾಟ್ಯದ ವಿವಿಧ ಭಂಗಿಗಳ ಚಿತ್ರಗಳು, ಕರಾವಳಿ ಪ್ರದೇಶದ ಕಥಕ್ಕಳಿ ನೃತ್ಯದ ಚಿತ್ರಗಳು ಹೀಗೆ ಹತ್ತು ಹಲವು ವಿವಿಧ

ಆಕರ್ಷಣೆ ಚಿತ್ರಗಳು ನೋಡುಗರನ್ನು ಕಂಗೊಳಿಸುವ ಮೂಲಕ ಉತ್ತರ ಕರ್ನಾಟಕದಲ್ಲಿಯೇ ಗೋಡೆ ಉದ್ಯಾನವನ ಹೊಂದಿರುವ ಏಕೈಕ ರೈಲ್ವೆ ನಿಲ್ದಾಣ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

1200 ಚದರ ಅಡಿಯ ಕಟ್ಟಡ ಗೋಡೆಯಲ್ಲಿ ಉದ್ಯಾನವನ ನಿರ್ಮಿಸಲಾಗಿದ್ದು, ಈ ರೀತಿಯ ಗೋಡೆ ಉದ್ಯಾನವನದಿಂದ 5 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಡಿಮೆ ಮಾಡಬಹುದಾಗಿದೆ. ಗ್ರೀನ್‌ರೀಪ್, ಸೆಕ್ರಸಿಯಾ ಸೇರಿದಂತೆ ವಿವಿಧ ಸಸ್ಯಗಳನ್ನು ಅಳವಡಿಸಲಾಗಿದೆ.

19.95 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಕಟ್ಟಡದ ಕಾಮಗಾರಿಗೆ 2018ರ ಡಿ. 24 ರಂದು ಸಂಸದ ಪ್ರಹ್ಲಾದ ಜೋಶಿ ಚಾಲನೆ ನೀಡಿದ್ದರು. ಇದೀಗ 3 ವರ್ಷ ಸನ್ನಿಹಿತಕ್ಕೆ ಬಂದಿರುವ ನಿಲ್ದಾಣದ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಬಹುತೇಕ ಮುಕ್ತಾಯ ಹಂತದಲ್ಲಿದೆ. ಹೀಗಾಗಿ ನಿಲ್ದಾಣದ ಸ್ವರೂಪ ಬದಲಾಗಿ ಹೈಟೆಕ್ ಸ್ಪರ್ಶದೊಂದಿಗೆ ಕಂಗೊಳಿಸುತ್ತಿದೆ. ಈ ಕಟ್ಟಡವನ್ನು ಭಾರತೀಯ ರೈಲ್ವೆ ವಿನೂತನ ಕಲ್ಪನೆ ಅಡಿ ಬಯೋಫಿಲಿಕ್ ವಾಸ್ತುಶಿಲ್ಪ ಆಧರಿಸಿ ನಿರ್ಮಿಸಲಾಗಿದೆ.

ಆಕರ್ಷಕ ಉದ್ಯಾನ, ಪ್ರವೇಶ ದ್ವಾರ ಹಾಗೂ ಟಿಕೆಟ್ ಬುಕ್ಕಿಂಗ್ ಕಚೇರಿ ಗೋಡೆಗಳ ಹಾಗೂ ನಿಲ್ದಾಣ ಬಳಿಯ ರಸ್ತೆಗಳ ಪಕ್ಕದ ಗೋಡೆಗಳ ಮೇಲೆ ಸ್ಥಳೀಯ (ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ) ಕಲೆಗಳನ್ನು ಬಿಂಬಿಸುವ ಮುರಾಲ್ ಚಿತ್ರಕಲೆಗಳು ಗಮನಸೆಳೆಯುತ್ತಿವೆ.

ಕಟ್ಟಡ ಗೋಡೆಯಲ್ಲಿ ಉದ್ಯಾನವನ ಕಣ್ಮನ ಸೆಳೆಯುತ್ತಿದ್ದು, ಇದರ ಕೆಳಗೆ ಈ ಗೋಡೆಯ ಅಂದ ಹೆಚ್ಚಿಸಲು ಐ ಲವ್ ಧಾರವಾಡ ಫಲಕ ಅಳವಡಿಸಲಾಗಿದೆ. ಹೀಗಾಗಿ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ, ಈ ಜಾಗವು ವಿಶೇಷವಾಗಿ ಕಾಣಿಸುತ್ತಿದೆ. ಹೀಗಾಗಿ ಪ್ರಯಾಣಿಕರು ಅದರ ಮುಂದೆ ನಿಂತು ಸೆಲ್ಪಿ ತೆಗೆದುಕೊಳ್ಳುವ ನೆಚ್ಚಿನ ಜಾಗವಾಗಿ ಮಾರ್ಪಟ್ಟಿದೆ. ಒಟ್ಟಾರೆಯಾಗಿ ಧಾರವಾಡ ರೈಲು ನಿಲ್ದಾಣ ನವೀಕರಣಗೊಂಡು ಪ್ರಯಾಣಿಕರ ಪ್ರೀತಿಗೆ ಪಾತ್ರವಾಗಿದೆ.

Edited By : Nagesh Gaonkar
Kshetra Samachara

Kshetra Samachara

22/10/2021 05:58 pm

Cinque Terre

56.85 K

Cinque Terre

17

ಸಂಬಂಧಿತ ಸುದ್ದಿ