ಧಾರವಾಡ: ಮಳೆಯಿಂದಾಗಿ ಮನೆ ಕಳೆದುಕೊಂಡ ಬಡವರಿಗೆ ಪರಿಹಾರ ಸಿಗಬೇಕು ಅಂದ್ರೆ ಗ್ರಾಮ ಲೆಕ್ಕಾಧಿಕಾರಿಗೆ 50 ಸಾವಿರ ರೂಪಾಯಿ ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.
ಧಾರವಾಡ ತಾಲೂಕಿನ ಮರೇವಾಡ ಗ್ರಾಮದಲ್ಲಿ ಇಂತಹ ಘಟನಾವಳಿಗಳು ನಡೆಯುತ್ತಿದ್ದು, ಮನೆ ಕಳೆದುಕೊಂಡ ಬಡವರಿಗೆ ಪರಿಹಾರ ಸಿಗದೇ ಲಂಚ ಕೊಡಲೂ ಆಗದೇ ಪರದಾಡುವಂತಾಗಿದೆ.
ಸರ್ಕಾರದಿಂದ ಈಗಾಗಲೇ ಅರ್ಹ ಫಲಾನುಭವಿಗಳಿಗೆ ಐದು ಲಕ್ಷ ಪರಿಹಾರ ಕೂಡ ಬಂದಿದ್ದು, ಅದನ್ನು ಬಿಡುಗಡೆ ಮಾಡಬೇಕು ಎಂತಾದರೆ ಗ್ರಾಮ ಲೆಕ್ಕಾಧಿಕಾರಿ ಐವತ್ತು ಸಾವಿರ ಲಂಚ ಕೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನು ನೋಡಿದರೆ ದೇವರು ವರ ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ ಎಂಬಂತಾಗಿದೆ.
2018-19ರಲ್ಲಿ ಮರೇವಾಡ ಗ್ರಾಮದಲ್ಲಿ ಚಂದ್ರಶೇಖರ ಚೌಡಿಮನಿ ಹಾಗೂ ಚನ್ನಬಸಪ್ಪ ಸಲಕಿ ಎಂಬುವವರಿಗೆ ಸೇರಿದ ಮನೆಗಳು ಮಳೆಯಿಂದಾಗಿ ನೆಲಕಚ್ಚಿವೆ. ಇವರಿಗೆ ಸಮಾಧಾನಕರ ಬಹುಮಾನ ಎನ್ನುವ ರೀತಿಯಲ್ಲಿ ಕೇವಲ 50 ಸಾವಿರ ಪರಿಹಾರ ನೀಡಲಾಗಿದೆ. ಮನೆ ಸರ್ವೆ ಮಾಡಿದ ಪ್ರಕಾರ 3 ರಿಂದ 5 ಲಕ್ಷ ಪರಿಹಾರ ದೊರಕಬೇಕಿತ್ತು. ಆದರೆ, 50 ಸಾವಿರ ಪರಿಹಾರ ನೀಡಲಾಗಿದೆ. ಮನೆ ಇಲ್ಲದೇ ಪರದಾಡುತ್ತಿರುವ ಇವರು ಹೆಚ್ಚಿನ ಪರಿಹಾರ ಬೇಕು ಅಂತಾ ಮೇಲಾಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇಂತಹ ನೊಂದ ಬಡ ಕುಟುಂಬಳಿಗೆ ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸಿ ಪರಿಹಾರ ದೊರಕುವಂತೆ ಮಾಡಬೇಕಿದೆ.
Kshetra Samachara
05/10/2021 01:04 pm