ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿಗಾರರಿಂದ
ಹುಬ್ಬಳ್ಳಿ : ಹದಿನಾಲ್ಕು ಜನ ಅಮಾಯಕರ ಆಹುತಿ ನಂತರವೇ ಈ ಬೈಪಾಸ್ ರಸ್ತೆ ಅಗಲೀಕರಣಕ್ಕೆ ಕಾಲ ಕೂಡಿ ಬಂದಿತೋ ಏನೋ, ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ-ಧಾರವಾಡ ಬೈಪಾಸ್ 30 ಕಿಮಿ ರಸ್ತೆ ಷಟ್ಪಥ ರಸ್ತೆಯಾಗಲಿದೆ.
ಗುರವಾರ ಹೊಸದಿಲ್ಲಿಯ ಹೆದ್ದಾರಿ ಮಂತ್ರಾಲಯದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಬೈಪಾಸ್ 30 ಕಿಮಿ ರಸ್ತೆಯನ್ನು ಷಟ್ಪಥ ರಸ್ತೆಯನ್ನಾಗಿ ಮಾರ್ಪಡಿಸಲು ಈ ಕೂಡಲೇ ಟೆಂಡರ್ ಕರೆಯುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಹಿಂದೆಯೇ ಈ ರಸ್ತೆಯನ್ನು ನಿರ್ಮಾಣ ಮಾಡಿ ನಿರ್ವಹಣೆ ಮಾಡುತ್ತಿರುವ ನಂದಿ ಹೈವೇ ಡೆವಲಪರ್ಸ್ ಸಹಯೋಗದೊಂದಿಗೆ ಆರು ಪಥ ಮುಖ್ಯ ರಸ್ತೆ ಹಾಗೂ ಸಮರ್ಪಕವಾಗಿ ಸರ್ವಿಸ್ ರಸ್ತೆಯನ್ನು ಎರಡೂ ಕಡೆ ನಿರ್ಮಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಡಿ.ಪಿ.ಆರ್. ತಯಾರಿಸಲಾಗಿದ್ದು ಸಾರ್ವಜನಿಕರ ಅವಶ್ಯಕತೆಗೆ ಅನುಕೂಲವಾಗಿ ಆರ್.ಓ.ಬಿ. ಮತ್ತು ಆರ್.ಯು.ಬಿ. ಸೇರಿಸಲು ಕೂಡಾ ಸೂಚನೆ ನೀಡಿದ್ದು, ಮುಖ್ಯವಾಗಿ 33 ಹೆಕ್ಟೇರ್ ಭೂ ಸ್ವಾಧೀನ ಅವಶ್ಯವಾಗಿದ್ದು, ಭೂಮಿ ವಶಪಡಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿ ಪ್ರಾರಂಭದ ನಂತರ ಯಾವುದೇ ಅಡೆತಡೆಗಳು ಬಾರದ ರೀತಿಯಲ್ಲಿ ಸಂಬಂಧಪಟ್ಟ ಎಲ್ಲಾ ಕಡೆಗಳಿಂದ ಒಡಂಬಡಿಕೆ ಮಾಡಿಕೊಳ್ಳುವಂತೆ ಸೂಚಿಸಿದರು.
ಕಳೆದ ಜುಲೈ ತಿಂಗಳಿನಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಸಚಿವ ಪ್ರಲ್ಹಾದ ಜೋಶಿಯವರು ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯನ್ನು ಷಟ್ಪಥ ರಸ್ತೆಯನ್ನಾಗಿಸಲು ಪ್ರಸ್ತಾವನೆಯನ್ನು ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಕೇಂದ್ರ ಕಛೇರಿಗೆ ಶೀಘ್ರವಾಗಿ ಕಳುಹಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ನಂದಿ ಡೆವಲಪರ್ಸ್ ಅಧಿಕಾರಿಗಲೂ ಸಹ ಇಂದಿ ಈ ಸಭೆಯಲ್ಲಿ ಭಾಗವಹಿಸಿ ರಸ್ತೆ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಸಭೆಯಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಸಂಸರಾದ ಶಿವಕುಮಾರ ಉದಾಸಿ, ಜಿ. ಎಂ.ಸಿದ್ದೇಶ್ವರ, ಗದ್ದೀಗೌಡರ್, ನಳಿನ್ ಕುಮಾರ ಕಟಿಲ್, ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯದ ಕಾರ್ಯದರ್ಶಿ ರಾಜ್ಯ ಪಿಡಬ್ಲ್ಯೂಡಿ ಅಪರ ಮುಖ್ಯ ಕಾರ್ಯದರ್ಶಿ, ಎನ್.ಹೆಚ್.ಎ.ಐ. ಚೇರ್ಮನ್ ಧಾರವಾಡ ಜಿಲ್ಲಾಧಿಕಾರಿ, ನಿತೇಶ್ ಪಾಟೀಲ್, ಹುಧಾ ಪೋಲಿಸ್ ಆಯುಕ್ತರು ಲಾಬೂರಾಮ್ ಮಹಾನಗರ ಪಾಲಿಕೆ ಆಯುಕ್ತರು ಸುರೇಶ್ ಇಟ್ನಾಳ ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.
Kshetra Samachara
11/02/2021 07:38 pm