ಧಾರವಾಡ: ಧಾರವಾಡ-ಬೆಳಗಾವಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಆರಂಭದಲ್ಲಿಯೇ ವಿರೋಧವೊಂದು ಎದುರಾಗಿದೆ. ಧಾರವಾಡ ಮತ್ತು ಬೆಳಗಾವಿ ಮಧ್ಯದ ರೈಲು ಅಂತರ ಕಡಿತಗೊಳಿಸಿ ನೇರ ರೈಲು ಸಂಚಾರ ಕಲ್ಪಿಸುವ ದೃಷ್ಟಿಯಿಂದ ಈಗಾಗಲೇ ರೈಲು ಮಾರ್ಗ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ ಈ ನೂತನ ರೈಲು ಮಾರ್ಗ ಕಾರ್ಯರೂಪಕ್ಕೆ ಬರಲು ನೂರಾರು ರೈತರು ತಮ್ಮ ಫಲವತ್ತಾದ ಜಮೀನು ಕಳೆದುಕೊಳ್ಳಬೇಕಾಗಿರುವುದರಿಂದ ಕೆಲ ರೈತರಿಂದ ವಿರೋಧದ ಕೂಗು ಕೇಳಿ ಬರುತ್ತಿದೆ.
ಧಾರವಾಡದಿಂದ ಬೆಳಗಾವಿಗೆ ಸದ್ಯ ಲೋಂಡಾ ಮೂಲಕ ಇರುವ ಮಾರ್ಗ ಬಹುದೂರ. ರಸ್ತೆ ಮೂಲಕ ಸಾಗಿದರೆ ಒಂದು ಗಂಟೆಯಲ್ಲಿ ಮುಟ್ಟಬಹುದಾದ ಬೆಳಗಾವಿಗೆ ರೈಲಿನಲ್ಲಿ ತೆರಳಲು ಬರೋಬ್ಬರಿ ಮೂರು ಗಂಟೆಗಳು ಬೇಕು. ಈ ಹಿನ್ನೆಲೆಯಲ್ಲಿ ಪ್ರಯಾಣದ ಸುದೀರ್ಘ ಸಮಯವನ್ನು ಕಡಿತಗೊಳಿಸಲು ನೂತನ ರೈಲು ಮಾರ್ಗಕ್ಕೆ ಹಸಿರು ನಿಶಾನೆ ದೊರತಿದೆ.
ಧಾರವಾಡ-ಬೆಳಗಾವಿ ಮಧ್ಯೆ ನೇರ ರೈಲಿನ ಸೌಲಭ್ಯ ಕಲ್ಪಿಸಿ ಜನರಿಗೆ ಅನುಕೂಲ ಮಾಡಬೇಕು ಎನ್ನುವುದು ದಶಕಗಳ ಹೋರಾಟ ಹಾಗೂ ಜನರ ಬೇಡಿಕೆಯಾಗಿತ್ತು. ಅದರಲ್ಲಿಯೂ ಕೇಂದ್ರ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಆದರೆ ಈ ಯೋಜನೆಗೆ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಇಬ್ಬರು ರೈತರು ನಮಗಂತೂ ಈ ರೈಲು ಮಾರ್ಗ ಬೇಡವೇ ಬೇಡ. ಈಗಾಗಲೇ ಇಂತಹ ಅಭಿವೃದ್ಧಿ ಕೆಲಸಗಳಿಗೆ ಜಮೀನು ಕಳೆದುಕೊಂಡು ಬಡವರಾಗಿದ್ದೇವೆ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಯೋಜನೆಗೆ ಈ ಇಬ್ಬರು ರೈತರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ರೈಲು ಮಾರ್ಗ ಬೇಕು ಎನ್ನುವ ಜನರೇ ಬಹುತೇಕರಿದ್ದಾರೆ. ಸರ್ಕಾರ ಹಾಗೂ ಇಲ್ಲಿನ ಜನಪ್ರತಿನಿಧಿಗಳು ಈ ಇಬ್ಬರೂ ರೈತರ ಮನವೊಲಿಸುವ ಕೆಲಸವನ್ನು ಹೇಗೆ ಮಾಡುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.
Kshetra Samachara
11/02/2021 04:07 pm