ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಅದು ಆ ಮಹಾನಗರ ಪಾಲಿಕೆಗೆ ಅತೀ ಹೆಚ್ಚು ತೆರಿಗೆ ತುಂಬುವ ಮಾರುಕಟ್ಟೆ ಪ್ರದೇಶ. ಆದ್ರೆ ಆ ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದಲೂ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲ, ಇದ್ದ ರಸ್ತೆನೂ ಸಂಪೂರ್ಣ ಹದಗೆಟ್ಟಿದ್ದು, ಈ ರಸ್ತೇಲಿ ಓಡಾಡಿದ್ರೆ ಮೈತುಂಬಾ ಧೂಳೇ ಧೂಳು.....ಅಷ್ಟಕ್ಕೂ ಯಾವುದು ಆ ರಸ್ತೆ? ಏನದು ಆ ರಸ್ತೆಯ ದುಸ್ತಿತಿ ಅಂತಾ ತೋರಿಸ್ತೀವಿ. ಈ ಸ್ಟೋರಿ ನೋಡಿ......
ಹೀಗೆ ಈ ರಸ್ತೇಲಿ ಓಡಾಡಿದ್ರೆ ಮೈಯೆಲ್ಲ ಧೂಳು. ಇನ್ನು ವಾಹನ ಸಂಚಾರ ಮಾಡೋವಾಗ ಕೊಂಚ ಯಾಮಾರಿದ್ರೆ ಮುಗೀತು. ಆ ವಾಹನದಲ್ಲಿರೋ ಪ್ರಯಾಣಿಕರ ಮೈ-ಕೈ ಮುರಿಯೋದಂತೂ ಗ್ಯಾರಂಟಿ. ಹೌದು ಈ ಎಲ್ಲಾ ದೃಶ್ಯ ಕಂಡುಬರೋದು ವಾಣಿಜ್ಯ ನಗರಿ ಹುಬ್ಬಳ್ಳಿಯ ದಾಜಿಬಾನ ಪೇಟೆ ರಸ್ತೆಯಲ್ಲಿ.
ಈ ರಸ್ತೆ ಇಡೀ ಉತ್ತರ ಕರ್ನಾಟಕ ಭಾಗದ ಜನರ ಮದುವೆ ಸೀಸನ್ ಗೆ ಜವಳಿ ಖರೀದಿಗೆ ಅತ್ಯಂತ ಹೆಸರು ವಾಸಿ, ಅಲ್ದೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಪ್ರತಿ ವರ್ಷ ಅತ್ಯಂತ ಹೆಚ್ಚಿನ ತೆರಿಗೆ ತುಂಬುವ ಜವಳಿ ಮಾರುಕಟ್ಟೆ ಅಂದ್ರೆ ಈ ಪ್ರದೇಶ.
ಆದ್ರೆ ಕಳೆದ ಹಲವಾರು ವರ್ಷಗಳಿಂದಲೂ ಈ ಪ್ರದೇಶದಲ್ಲಿ ಸಮರ್ಪಕವಾದ ರಸ್ತೆ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಹು-ಧಾ ಮಹಾನಗರ ಪಾಲಿಕೆಗೆ ಸಾಧ್ಯವಾಗಿಲ್ಲ.
ಈ ರಸ್ತೆಯಲ್ಲಿ ಸಂಚಾರ ಆರಂಭಿಸಿದ್ರೆ ಸಾಕು ಬರೀ ಧೂಳು ಆವರಿಸೋ ಈ ರಸ್ತೆ ದುರಸ್ತಿಗೆ, ಇಲ್ಲಿನ ನೂರಾರು ಜನ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಈ ಭಾಗದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಅದೆಷ್ಟೋ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಕೇವಲ ಭರವಸೆ ನೀಡೋ ಜನಪ್ರತಿನಿಧಿಗಳು ಇಂದಿಗೂ ಈ ರಸ್ತೆ ದುರಸ್ತಿಗೆ ತಲೆಕೆಡಿಸಿಕೊಳ್ಳದಿರೋದು ಈ ಭಾಗದ ಜನರಲ್ಲಿ ಆಕ್ರೋಶ ವ್ಯಕ್ತವಾಗುವಂತೆ ಮಾಡಿದೆ.
ಇನ್ನು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ, ತುಳಜಾ ಭವಾನಿ ದೇವಸ್ಥಾನದ ವರೆಗೂ ಇಳಿಜಾರು ಪ್ರದೇಶದಿಂದ ಕೂಡಿರುವ ಈ ದಾಜಿಬಾನ್ ಪೇಟೆ, ಮಾರುಕಟ್ಟೆ ಪ್ರದೇಶದಲ್ಲಿ ಮಳೆಗಾಲದಲ್ಲಿ ಇಲ್ಲಿನ ಸ್ಥಿತಿ ಹೇಳತೀರದು.
ತುಳಜಾಭವಾನಿ ದೇವಸ್ಥಾನದಿಂದ ದುರ್ಗದಬೈಲ್ ಮಾರುಕಟ್ಟೆಗೆ ಸಂಪರ್ಕಕಲ್ಪಿಸುವ ರಸ್ತೆಯಲ್ಲಿ ದೊಡ್ಡ ಚರಂಡಿ ನಾಲಾ ಇದ್ದು, ಮಳೆಗಾಲ ಬಂತೆಂದರೆ ಸಾಕು ಈ ನಾಲಾ ಸಂಪೂರ್ಣ ತುಂಬಿ ಇಲ್ಲಿರುವ ದೇವಸ್ಥಾನ ಹಾಗೂ ಈ ಭಾಗದ ದೊಡ್ಡ ದೊಡ್ಡ ಜವಳಿ ಅಂಗಡಿಗಳಿಗೆ ನುಗ್ಗಿ ಸಾಕಷ್ಟು ತೊಂದರೆ ಅನುಭವಿಸುವಂತೆ ಮಾಡುತ್ತದೆ.
ಹೀಗಾಗಿ ಈ ಭಾಗದ ವ್ಯಾಪಾರಸ್ಥರು ಹಾಗೂ ಈ ರಸ್ತೆಯಲ್ಲಿ ದಿನನಿತ್ಯ ಸಂಚಾರ ಮಾಡವ ಸಾರ್ವಜನಿಕರು ಅಧಿಕಾರಿಗಳಿಗೆ ಪರಿಪರಿಯಾಗಿ ಬೇಡಿಕೊಂಡರೂ ಈವರೆಗೂ ಇಲ್ಲಿನ ಈ ದುರಂತ ಸಮಸ್ಯೆಯನ್ನ ಯಾರೂ ಕಿವಿಗೆ ಹಾಕಿಕೊಂಡಿಲ್ಲ ಎಂಬುದು ಇಲ್ಲಿನವರ ಗಂಭೀರ ಆರೋಪ.
ಒಟ್ಟಾರೆ ರಾಜ್ಯದ ಎರಡನೇ ಅತೀದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ, ಅತ್ಯಂತ ಹೆಚ್ಚಿನ ವಾಣಿಜ್ಯ ತೆರಿಗೆ ತುಂಬುವ ಈ ದಾಜಿಬಾನ್ ಪೇಟೆಯ ದುಸ್ತಿತಿಯೇ ಈ ರೀತಿಯಾದ್ರೆ
ಇನ್ನ ಅವಳಿನಗರದ ಸ್ಮಾರ್ಟ್ ಸಿಟಿ ಕಾಮಗಾರಿಗಳು ಅದೆಷ್ಟು ವರ್ಷಕ್ಕೆ ಪೂರ್ಣಗೊಳ್ಳುತ್ತವೆ ಅನ್ನೋದು ಇಲ್ಲಿನ ಜನರ ಪ್ರಶ್ನೆಯಾಗಿ ಕಾಡುತ್ತಿದೆ. ಇನ್ನಾದ್ರೂ ಈ ರಸ್ತೆ ದುರಸ್ತಿಗೆ ಅಧಿಕಾರಿಗಳು ಮುಂದಾಗಿ ಇಲ್ಲಿನ ಜನರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ.....!
Kshetra Samachara
08/01/2021 12:29 pm