ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಟ್ರಾಫಿಕ್ ನಿರ್ವಹಣೆಯೇ ದೊಡ್ಡ ಸವಾಲಾಗಿದೆ. ಈ ಸವಾಲು ಎದುರಿಸಲು ಎರಡು ಇಲಾಖೆಗಳು ವಿನೂತನ ಕಾರ್ಯಕ್ಕೆ ಮುಂದಾಗಿವೆ. ಸ್ಮಾರ್ಟ್ ಸಿಟಿಯ ರೀತಿಯಲ್ಲಿ ಸ್ಮಾರ್ಟ್ ಆಗಿ ನಿರ್ವಹಣೆ ಮಾಡಲು ನಿರ್ಧಾರ ಮಾಡಿದೆ.
ಹೌದು...ಬೆಳೆಯುತ್ತಿರುವ ಹುಬ್ಬಳ್ಳಿ ಧಾರವಾಡ ಅವಳಿನಗರದ ಸಂಚಾರ ದಟ್ಟಣೆ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹು-ಧಾ ಪೊಲೀಸ್ ಕಮಿಷನರೇಟ್‌ನ ನವನಗರದ ಕಚೇರಿ ಕಟ್ಟಡದಲ್ಲಿ ಸ್ಮಾರ್ಟ್ ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ) ಶೀಘ್ರವೇ ತಲೆ ಎತ್ತಲಿದೆ. ಮಹಾನಗರ ಪಾಲಿಕೆಯ ಗಾಂಧಿ ನಗರ ವಿಕಾಸ ಯೋಜನೆಯ ವಿಶೇಷ ಅನುದಾನದಡಿ ಐದು ಕೋಟಿ ರೂ. ವೆಚ್ಚದಲ್ಲಿ ಕಮಿಷನರೇಟ್ ಕಚೇರಿಯ ಎರಡನೇ ಮಹಡಿಯಲ್ಲಿ 1.3 ಕೋ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದೆ. ಇದರಲ್ಲಿ ಒಂದು ಹಾಲ್, ಒಂದು ಕಚೇರಿ, ಪುರುಷ-ಮಹಿಳೆಯರ ಪ್ರತ್ಯೇಕ ಶೌಚಗೃಹಗಳು ಒಳಗೊಂಡಿದೆ. ಕಟ್ಟಡ ಕಾಮಗಾರಿ ಈಗಾಗಲೇ ಬಹುತೇಕ ಪೂರ್ಣಗೊಂಡಿದೆ. ಒಟ್ಟು 4 ಕೋಟಿ ರೂ. ವೆಚ್ಚದಲ್ಲಿ 371 ಬುಲೆಟ್ ಹಾಗೂ ಪಿಟಿಝಡ್ ಸಿಸಿಟಿವಿ ಕ್ಯಾಮೆರಾಗಳು, ಎಲ್‌ಇಡಿ ಪರದೆ, ಪಿಸಿಆರ್, ಸರ್ವರ್, ಮತ್ತಿತರ ಅತ್ಯಾಧುನಿಕ ಉಪಕರಣಗಳ ಅಳವಡಿಕೆಗೆ ಸಿದ್ಧತೆ ನಡೆಸಲಾಗಿದೆ.
ಇನ್ನೂ ಅವಳಿನಗರದ 19 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 371 ಅತ್ಯಾಧುನಿಕ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಒಂದೊಂದು ಠಾಣೆ ವ್ಯಾಪ್ತಿಯಲ್ಲಿ 15 ರಿಂದ 30ರವರೆಗೆ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಕ್ಯಾಮೆರಾಗಳು ಸಂಚಾರ ನಿಯಮ ಉಲ್ಲಂಘನೆ, ಹೆಲೈಟ್ ರಹಿತ ಬೈಕ್ ಚಾಲನೆ, ಟ್ರಿಪಲ್ ರೈಡಿಂಗ್, ಸಿಗ್ನಲ್ ಜಂಪಿಂಗ್, ಮತ್ತಿತರ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಛಾಯಾಚಿತ್ರವನ್ನು ಸ್ವಯಂಪ್ರೇರಿತವಾಗಿ ತೆಗೆದು ರವಾನಿಸುತ್ತದೆ, ಟಿಎಂಸಿಯಲ್ಲಿರುವ ಸಿಬ್ಬಂದಿ ವಾಹನದ ಮಾಲೀಕರ ವಿಳಾಸಕ್ಕೆ ದಂಡದ ನೋಟಿಸ್ ರವಾನಿಸುತ್ತಾರೆ.
ಒಟ್ಟಿನಲ್ಲಿ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಸ್ಮಾರ್ಟ್ ಟಿಎಂಸಿ ವ್ಯವಸ್ಥೆಗೆ ಮುಂದಾಗಿರುವುದು ವಿಶೇಷವಾಗಿದೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರಿಗೆ ಬಿಸಿ ಮುಟ್ಟಿಸಲು ನಿರ್ಧಾರ ಕೈಗೆತ್ತಿಕೊಂಡಿರುವುದು ಸಾರ್ವಜನಿಕರಿಗೆ ಅನುಕೂಲವಾಗಬೇಕಿದೆ.
ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
08/04/2022 01:55 pm