ಧಾರವಾಡ: ದೇಶದೆಲ್ಲೆಡೆ ಇದೀಗ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಲೇ ಇವೆ. ಸರ್ಕಾರಗಳು ಲೈಂಗಿಕ ದೌರ್ಜನ್ಯ ತಡೆಗಟ್ಟಬೇಕು ಎಂದು ಎಷ್ಟೇ ಕ್ರಮಗಳನ್ನು ಕೈಗೊಂಡರು ಕೂಡ ಅಂತಹ ಪ್ರಕರಣಗಳಿಗೆ ಮಾತ್ರ ಇತಿಶ್ರಿ ಹಾಡಲು ಆಗುತ್ತಿಲ್ಲ.
ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಬೇಕು ಹಾಗೂ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಿ ಮುಂದೆ ದೌರ್ಜನ್ಯಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ರಾಜಧಾನಿ ಬೆಂಗಳೂರಿನ ಬನ್ನೇರುಘಟ್ಟದಿಂದ ಯುವಕನೋರ್ವ ಸೈಕಲ್ ಜಾಥಾ ಆರಂಭಿಸಿದ್ದಾರೆ.
ದೃಶ್ಯಗಳಲ್ಲಿ ಹೀಗೆ ಸೈಕಲ್ ತುಳಿಯುತ್ತ ಬರುತ್ತಿರುವ ಯುವಕನ ಹೆಸರು ಕಿರಣ್. ಇವರು ಬೆಂಗಳೂರಿನ ಬನ್ನೇರುಘಟ್ಟದ ನಿವಾಸಿ. ಬಿಎ ವಿದ್ಯಾಭ್ಯಾಸ ಮಾಡುತ್ತಿರುವ ಈತ, ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಬೇಕು ಹಾಗೂ ಸರ್ಕಾರ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಜಾರಿ ಮಾಡಬೇಕು ಎಂದು ಆಗ್ರಹಿಸಿ ಕಳೆದ 31 ದಿನಗಳ ಹಿಂದೆ ಸೈಕಲ್ ಜಾಥಾ ಆರಂಭಿಸಿದ್ದಾನೆ.
ಈಗಾಗಲೇ 14 ಜಿಲ್ಲೆಗಳಿಗೆ ಭೇಟಿ ಅಲ್ಲಿನ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಕಿರಣ್, ಗುರುವಾರ ಧಾರವಾಡ ಜಿಲ್ಲೆಗೂ ಭೇಟಿ ನೀಡಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾನೆ.
ಸೈಕಲ್ ಜಾಥಾ ಮೂಲಕ ಬಂದ ಕಿರಣ್ ಅವರನ್ನು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಸ್ವಾಗತಿಸಿ, ಅವರ ಸೈಕಲ್ ಜಾಥಾಕ್ಕೆ ಬೆಂಬಲ ಸೂಚಿಸಿದರು.
ಕಿರಣ್ ಅವರು ಈಗಾಗಲೇ ಧಾರವಾಡವನ್ನೊಳಗೊಂಡು 15 ಜಿಲ್ಲೆಗೆ ಭೇಟಿ ನೀಡಿದ್ದು, ರಾಜ್ಯದ 31 ಜಿಲ್ಲೆಗಳಿಗೂ ಭೇಟಿ ನೀಡಿ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವಂತೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಪ್ರತಿದಿನ 100 ಕಿಲೋ ಮೀಟರ್ ಸೈಕಲ್‌ನಲ್ಲೇ ತೆರಳುವ ಕಿರಣ್ ಅವರ ಕಾರ್ಯ ಮೆಚ್ಚುವಂತದ್ದು. ಈ ಯುವ ಉತ್ಸಾಹಿ ಯುವಕನ ಕಾರ್ಯಕ್ಕೆ ಸರ್ಕಾರದಿಂದ ಸ್ಪಂದನೆ ಸಿಗುವಂತಾಗಲಿ ಎಂಬುದೇ ನಮ್ಮ ಹಾರೈಕೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
23/09/2021 03:26 pm