ಹುಬ್ಬಳ್ಳಿ: ಆತ ಇನ್ನೂ ಅಮ್ಮನ ಮಡಿಲಲ್ಲಿ ಆಟ ಆಡುವ ಕಂದ. ಆದರೆ ಆತನ ಜ್ಞಾನ ನೋಡಿದರೇ ನಿಜಕ್ಕೂ ಎಂತಹವರಿಗೂ ಅಚ್ಚರಿ ಆಗುತ್ತೆ. ತನ್ನದೇ ಆದ ಅಪಾರ ಜ್ಞಾಪಕ ಶಕ್ತಿಯಿಂದ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾನೆ. ಹಾಗಿದ್ರೆ ಯಾರು ಆ ಪುಟ್ಟ ಕಂದ..? ಆತನ ಸಾಧನೆ ಆದರೂ ಏನು ಅಂತೀರಾ ಈ ಸ್ಟೋರಿ ನೋಡಿ...
ಹೀಗೆ ಆಟ ಆಡುತ್ತಾ ಪಟಾ ಪಟ್ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸುವ ತೊದಲು ನುಡಿಯ ಈ ಕಂದನ ಹೆಸರು ಅಥರ್ವ ಎಸ್. ಈತ ವಾಣಿಜ್ಯನಗರಿ ಹುಬ್ಬಳ್ಳಿ ಶಿರೂರ್ ಪಾರ್ಕ್ ನಿವಾಸಿಯಾದ ಪ್ರತಿಭಾ ಹಾಗೂ ಶರಣ್ ದಂಪತಿ ಮಗ. ಅಥರ್ವ ತನ್ನ ಅಗಾಧವಾದ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದ್ದಾನೆ. ಹೌದು... ಎರಡು ವರ್ಷದ ಈ ಬಾಲಕ ಜನರಲ್ ನಾಲೆಡ್ಜ್, ಅಂಕಿ ಸಂಖ್ಯೆಗಳನ್ನು ಅರಳು ಹುರಿದಂತೆ ಹೇಳುತ್ತಾನೆ. ಅಲ್ಲದೇ ವಿಶ್ವದ ಬಹುತೇಕ ರಾಷ್ಟ್ರದ ನಕ್ಷೆಯನ್ನು ನೋಡುತ್ತಲೇ ದೇಶವನ್ನು ಗುರುತಿಸುತ್ತಾನೆ. ಎರಡು ವರ್ಷದಲ್ಲಿಯೇ ಇಂತಹದೊಂದು ಸಾಧನೆ ಮಾಡಿದ್ದು, ಹೆತ್ತವರ ಹರ್ಷವನ್ನು ಇಮ್ಮಡಿಗೊಳಿಸಿದೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್-2022ನಲ್ಲಿ ತನ್ನ ಹೆಸರನ್ನು ದಾಖಲು ಮಾಡಿರುವ ಅಥರ್ವ್ ನ ಸಾಧನೆಗೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗಿದೆ. ಆನ್ಲೈನ್ ಮೂಲಕ ನಡೆದ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಅಥರ್ವ ಸಾಧನೆ ಮಾಡಿದ್ದು, ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಿದೆ.
ಒಟ್ಟಿನಲ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಂತಹದೊಂದು ಸಾಧನೆ ಮಾಡುವುದು ಅಂದರೆ ಸಾಮಾನ್ಯವಲ್ಲ. ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಹುಬ್ಬಳ್ಳಿ ಹುಡುಗ ದೇಶದ ಕೀರ್ತಿಯನ್ನು ಹೆಚ್ಚಿಸಲಿ ಎಂಬುವುದು ನಮ್ಮ ಆಶಯ..
ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/04/2022 08:24 pm