ಹುಬ್ಬಳ್ಳಿ: ಹಳೇ ಬಸ್ ನಿಲ್ದಾಣದಲ್ಲಿನ ಅಂಗಡಿಕಾರರು ಹಾಗೂ ವಾಯುವ್ಯ ಸಾರಿಗೆ ಇಲಾಖೆ ಅಧಿಕಾರಿಗಳ ನಡುವಿನ ಹಗ್ಗಜಗ್ಗಾಟ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ಹೌದು. ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಲ್ಲಿ 32 ವಾಣಿಜ್ಯ ಮಳಿಗೆಗಳಿವೆ. 30 ಸಾವಿರದಿಂದ 7 ಲಕ್ಷ ರೂ. ವರೆಗೆ ಮಾಸಿಕ ಬಾಡಿಗೆ ಮೇಲೆ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಇತ್ತೀಚೆಗೆ ಕರೊನಾದಿಂದ ಪ್ರಯಾಣಿಕರ ಸಂಖ್ಯೆಯೂ ಇಳಿಮುಖವಾಗಿರುವುದರ ಜತೆಗೆ ಹಳೇ ಬಸ್ ನಿಲ್ದಾಣವನ್ನು ಗ್ರಾಮೀಣ ಸಾರಿಗೆ ಬಸ್ಗಳ ಓಡಾಟಕ್ಕೆ ಸೀಮಿತಗೊಳಿಸಲಾಗಿದೆ. ಹೀಗಾಗಿ ಅಂಗಡಿಕಾರರ ಸಂಕಷ್ಟಕ್ಕೆ ಸ್ಪಂದಿಸಿ ಸಾರಿಗೆ ಇಲಾಖೆ ಮಾರ್ಚ, ಏಪ್ರಿಲ್ ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದೆ.
ಆದರೆ ಕೆಲ ಮಳಿಗೆದಾರರು ಮಾಸಿಕ ಬಾಡಿಗೆಯ 10 ಪಟ್ಟು ಹಣವನ್ನು ಸಂಸ್ಥೆಗೆ ಭದ್ರತಾ ಠೇವಣಿಯಾಗಿ ನೀಡಿದ್ದಾರೆ. ಅಂಥವರು ವ್ಯಾಪಾರ ಏನೂ ನಡೆಯುತ್ತಿಲ್ಲ, ಮಳಿಗೆ ಪರವಾನಗಿಯನ್ನು ರದ್ದುಪಡಿಸಿ ಭದ್ರತಾ ಠೇವಣಿ ವಾಪಸ್ ಕೊಡಿ ಎಂದು ಕೇಳಿದ್ದಾರೆ.
ಇದರ ಮಧ್ಯೆ ಸ್ಮಾರ್ಟ್ ಸಿಟಿ ಯೋಜನೆಯ 30 ಕೋ. ರೂ. ವೆಚ್ಚದಲ್ಲಿ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಹೊಸ ರೂಪ ಪಡೆಯಲಿದೆ. ಇದರಿಂದ ಹಳೇ ಬಸ್ ನಿಲ್ದಾಣ ಕಟ್ಟಡ ಕೆಡವಿ ಹೊಸ ಬಸ್ ನಿಲ್ದಾಣ ನಿರ್ವಿುಸುವುದು ಖಚಿತವಾಗುತ್ತಿದ್ದಂತೆ ‘ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಲು ತಾವು ಸಿದ್ಧರಿರುವುದಾಗಿ ಹಾಗೂ ತಮ್ಮದು ಯಾವುದೇ ಆಕ್ಷೇಪಣೆಗಳಿಲ್ಲ’ ಎಂದು ವಿಭಾಗೀಯ ನಿಯಂತ್ರಣಾದಿಕಾರಿ ಎಚ್. ರಾಮನಗೌಡರ್ ಜೂ. 19ರಂದು ಒಪ್ಪಿಗೆ ಪತ್ರ ಬರೆಯಿಸಿಕೊಂಡಿದ್ದರು. ಹಳೇ ಬಸ್ ನಿಲ್ದಾಣ ಹಸ್ತಾಂತರಿಸುವಂತೆ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ, ಈವರೆಗೆ ಲಿಖಿತವಾಗಿ ವಾಕರಸಾ ಸಂಸ್ಥೆಯನ್ನು ಕೋರಿಲ್ಲ. ಅದಿನ್ನು ಡಿಪಿಆರ್, ವಿನ್ಯಾಸದಲ್ಲಿ ಮುಳುಗಿದೆ. ಸಾರಿಗೆ ಸಂಸ್ಥೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿಳಂಬ ಧೋರಣೆಯಿಂದ ಮಳಿಗೆದಾರರು ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
Kshetra Samachara
27/09/2020 01:31 pm