ಕುಂದಗೋಳ: ಮಳೆ ಅವಘಡಕ್ಕೆ ಸಿಲುಕಿ ಮನೆ ಕಳೆದುಕೊಂಡವರಿಗೆ ಸರ್ಕಾರ ನೀಡುವ ಪರಿಹಾರವನ್ನು ಸ್ವತಃ ಫಲಾನುಭವಿಗಳೇ ನಿರಾಕರಿಸುತ್ತಿದ್ದರೂ ತಾಲೂಕು ಆಡಳಿತ ಮಾತ್ರ ಜಾಣ ಕುರುಡು ವರ್ತನೆ ತೋರಿ ಮನವಿ ಪತ್ರ ಸ್ವೀಕರಿಸುತ್ತಿದೆ.
ವರುಣನ ರೌದ್ರಾವತಾರಕ್ಕೆ ಕುಂದಗೋಳ ಹೋಬಳಿಯಲ್ಲಿ 84 ಮನೆ, ಸಂಶಿ ಹೋಬಳಿಯಲ್ಲಿ 154 ಮನೆ ಬಿದ್ದಿದ್ದು ಹೀಗೆ ಒಟ್ಟು ತಾಲೂಕಿನಲ್ಲಿ 238 ಮನೆಗಳು ಹಾನಿಯಾದ ಬಗ್ಗೆ ಸಾರ್ವಜನಿಕರಿಂದ ಅರ್ಜಿ ಸಲ್ಲಿಕೆಯಾಗಿವೆ.
ಆದರೆ, ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ ಅಂತಿಮ ಪಟ್ಟಿಯಲ್ಲಿ ಕುಂದಗೋಳ ಹೋಬಳಿ 28, ಸಂಶಿ ಹೋಬಳಿಯಲ್ಲಿ 99 ಮನೆ ಸೇರಿ ಕೇವಲ 127 ಮನೆ ಬಿದ್ದಿವೆ ಎಂದು ಅಂತಿಮ ವರದಿ ಸಿದ್ಧಪಡಿಸಿವೆ.
ಅದರಂತೆ ಮನೆ ಬಿದ್ದವರಿಗೆ ಮೂಗಿಗೆ ತುಪ್ಪ ಸವರಿದಂತೆ ಕೇವಲ 5200 ರೂ. ಮತ್ತು 3200 ರೂ. ಸರ್ಕಾರ ನೀಡುವುದನ್ನು ಫಲಾನುಭವಿಗಳು ನಿರಾಕರಿಸಿ ಮನವಿ ಪತ್ರವನ್ನು ಸ್ಥಳೀಯ ಅಧಿಕಾರಿಗಳಿಗೆ ಸಲ್ಲಿಸಿ, ಹೆಚ್ಚಿನ ಪರಿಹಾರಕ್ಕಾಗಿ ಶಾಸಕರಿಗೆ ಮನವಿ ಮಾಡಿದ್ದಾರೆ. ಮನೆ ಪುನಃ ನಿರ್ಮಿಸುವಷ್ಟು ಹಣ ಪರಿಹಾರ ನೀಡಲಿ ಎಂಬುದು ʼಪಬ್ಲಿಕ್ ನೆಕ್ಸ್ಟ್ʼ ಆಶಯ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
17/06/2022 09:24 pm