ವರದಿ: ಮಲ್ಲೇಶ ಸೂರಣಗಿ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರುಣ ಪ್ರತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಹೆಸ್ಕಾಂ, ಮಳೆ ಸಮಯ ಸಾರ್ವಜನಿಕರ ಸಮಸ್ಯೆ ನೀಗಿಸಲು ವಿನೂತನ ಕಾರ್ಯಾಚರಣೆಗಿಳಿದಿದೆ. ಇದರಿಂದ ಮಳೆಗಾಲದಲ್ಲೂ ʼಪವರ್ ಕಟ್ʼ ಬಾಧೆ ಇಲ್ಲ! ಹಾಗಿದ್ದರೆ ಏನಿದು ʼಪರಿಹಾರʼ ಅಂತೀರಾ, ಇಲ್ಲಿದೆ ಸಂಪೂರ್ಣ ಚಿತ್ರಣ...
ಹೌದು... ಮಳೆಗಾಲ ಸನಿಹ ಹಿನ್ನೆಲೆಯಲ್ಲಿ ಟ್ರಾನ್ಸ್ ಫಾರ್ಮರ್ ಸಂಬಂಧಿತ ಅವಘಡ ತಪ್ಪಿಸಲು ರಾಜ್ಯಾದ್ಯಂತ ಮೇ 5ರಿಂದ 20ರ ವರೆಗೆ ʼಟ್ರಾನ್ಸ್‌ಫಾರ್ಮರ್ಸ್ ನಿರ್ವಹಣೆ ಅಭಿಯಾನʼ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ನಿರ್ದೇಶನ ಮೇರೆಗೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ 7 ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ, ವಿಜಯಪುರದಲ್ಲಿ ನಡೆಯಲಿದೆ.
ಸಿಡಿಲು ಇತ್ಯಾದಿ ಕಾರಣಗಳಿಂದ ಪರಿವರ್ತಕಗಳ ಹಾನಿ ಸಾಧ್ಯತೆ ಇದೆ. ಜೊತೆಗೆ ಅಧಿಕ ಲೋಡ್ ನಿಂದ ಟ್ರಾನ್ಸ್ ಫಾರ್ಮರ್ ಗೆ ಹಾನಿಯಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಅಭಿಯಾನ ನಡೆಸಲಾಗುತ್ತಿದೆ. ಅಭಿಯಾನದಲ್ಲಿ ಪರಿವರ್ತಕ ಗುಣಮಟ್ಟ, ಸಂರಕ್ಷಣೆ, ವಿದ್ಯುತ್ ಅಡಚಣೆ ಕಡಿಮೆಗೊಳಿಸಲು ಹಾಗೂ ಸುರಕ್ಷತಾ ನಿರ್ವಹಣೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅಭಿಯಾನದಲ್ಲಿ ಎಲ್ಲ ಹಂತದ ಅಧಿಕಾರಿಗಳೂ ಭಾಗಿಯಾಗಿ ಪ್ರತಿದಿನ ಪರಿಶೀಲಿಸಿದ ಟ್ರಾನ್ಸ್ ಫಾರ್ಮರ್ ಗಳ ವಿವರ, ಅದರಲ್ಲಿನ ನ್ಯೂನ್ಯತೆ, ಯಾವ ಕಾರಣಕ್ಕಾಗಿ ತೊಂದರೆ ಕಾಣಿಸಿಕೊಂಡಿದೆ ಎಂಬುದನ್ನು ಪರಿಶೀಲಿಸಿ ಸರಿಪಡಿಸಲಾಗುವುದು.
ಟ್ರಾನ್ಸ್ ಫಾರ್ಮರ್ ರಿಪೇರಿಗೆ ಇಂಧನ ಇಲಾಖೆ ಪ್ರತಿವರ್ಷ ಹಣ ವೆಚ್ಚ ಮಾಡುತ್ತದೆ. ನಿರ್ವಹಣೆ ಕೆಲಸವನ್ನು ಕಾಲ ಕಾಲಕ್ಕೆ ನಡೆಸಿದರೆ ರಿಪೇರಿ ವೆಚ್ಚ ತಗ್ಗಿಸುವುದಕ್ಕೆ ಸಾಧ್ಯ. ಜತೆಗೆ ಎಲ್ಲಿ ಹೊಸ ಟ್ರಾನ್ಸ್ ಫಾರ್ಮರ್ ತುರ್ತು ಅಗತ್ಯವಿದೆ ಎಂಬುದನ್ನೂ ಈ ಅಭಿಯಾನದ ಮೂಲಕ ತಿಳಿಯಬಹುದು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 15 ದಿನಗಳ ಅಭಿಯಾನ ನಡೆಸಲಾಗುತ್ತಿದೆ. ಈಗಾಗಲೇ ಅಭಿಯಾನ ಪ್ರಾರಂಭಗೊಂಡಿದ್ದು, ಹೆಸ್ಕಾಂ ವ್ಯಾಪ್ತಿಯಲ್ಲಿ ಮೊದಲ ದಿನ ಒಟ್ಟು 2318 ಟ್ರಾನ್ಸ್ ಫಾರ್ಮರ್ ಗಳ ನಿರ್ವಹಣೆ ಕಾರ್ಯ ಕೈಗೊಳ್ಳಲಾಗಿದೆ.
Kshetra Samachara
07/05/2022 12:00 pm