ಧಾರವಾಡ: ಧಾರವಾಡ ಹೊರವಲಯದಲ್ಲಿರುವ ಕೃಷಿನಗರದ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ದೀನ ದಯಾಳ್ ಉಪಾಧ್ಯಾಯ ಸೌಹಾರ್ಧ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ 230ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಳೆದ ಎರಡು ತಿಂಗಳಿಂದ ಮಧ್ಯಾಹ್ನದ ಊಟವಿಲ್ಲದೇ ಅಕ್ಷರಶಃ ಪರದಾಟ ನಡೆಸುತ್ತಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜನಜಾಗೃತಿ ಸಂಘದ ಸದಸ್ಯರು, ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಷ್ಟೆಲ್ಲಾ ಅವ್ಯವಸ್ಥೆಯಿದ್ದರೂ ಇದಕ್ಕೆ ಸ್ಪಂದಿಸಬೇಕಾದ ಧಾರವಾಡ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವರ್ಗದವರು ಜಾಣಕುರುಡುರಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳಿಗೆ ಹಲವಾರು ಬಾರಿ ಕರೆ ಮಾಡಿ ಹಾಸ್ಟೆಲ್‌ಗೆ ಆಗಮಿಸುವಂತೆ ಜನಜಾಗೃತಿ ಸಂಘದ ಪದಾಧಿಕಾರಿಗಳು ಕರೆದರೂ ಕುಂಟು ನೆಪ ಹೇಳಿ ದೂರ ಉಳಿದರು. ಹಾಸ್ಟೆಲ್‌ಗೆ ಆಗಮಿಸದೇ ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನವನ್ನು ತೋರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಜನಜಾಗೃತಿ ಸಂಘದ ಸದಸ್ಯರು ಆಗ್ರಹಿಸಿದರು.
ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಅಧಿಕಾರಿಗಳ ಕಣ್ಣಾ ಮುಚ್ಚಾಲೆ ಆಟದ ಬಗ್ಗೆ ಮಾಹಿತಿ ನೀಡಿದರು. ಈ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ಜರುಗಿಸುವುದಾಗಿ ಸಚಿವರು ಭರವಸೆ ನೀಡಿದರು.
Kshetra Samachara
23/09/2022 10:54 pm