ಧಾರವಾಡ: ಧಾರವಾಡ ಸಮೀಪದ ನವಲೂರು ಬಳಿ ಅರ್ಧಕ್ಕೆ ನಿಂತ ಸೇತುವೆ ಒಂದಿದೆ. ಆ ಸೇತುವೆಯ ಪ್ಯಾನಲ್ ಗಳು ಇದೀಗ ಕಿತ್ತು ಬೀಳುತ್ತಿದ್ದು ನವಲೂರು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಅಂದಾಜು 50 ಕೋಟಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ನವಲೂರು ಗ್ರಾಮವನ್ನು ಬೇರ್ಪಡಿಸಿದಂತಾಗುತ್ತದೆ.
ಈ ಸೇತುವೆ ನಿರ್ಮಾಣ ಕಾಮಗಾರಿ ನಿಲ್ಲಿಸಿ ಎಂದು ನವಲೂರು ಗ್ರಾಮಸ್ಥರು ಒತ್ತಾಯ ಮಾಡಿದ್ದರಿಂದ ಆ ಸೇತುವೆ ನಿರ್ಮಾಣ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. 2 ವರ್ಷಗಳಿಂದ ಈ ಕಾಮಗಾರಿ ಅರ್ಧಕ್ಕೇ ನಿಂತಿದೆ.
ಈ ಸೇತುವೆಯ ಒಂದೊಂದೇ ಪ್ಯಾನಲ್ ಗಳು ಈ ಹಿಂದೆಯೂ ಕಿತ್ತು ಬೀಳುತ್ತಿದ್ದವು. ಈಗ ಮತ್ತೆ ಪ್ಯಾನಲ್ ಗಳು ಕಿತ್ತು ಒಳಗಡೆಯ ಮಣ್ಣು ಕುಸಿದು ಬೀಳುತ್ತಿರುವುದರಿಂದ ಆ ಮಾರ್ಗವಾಗಿ ಸಂಚರಿಸುವ ನವಲೂರು ಗ್ರಾಮಸ್ಥರು ಆತಂಕಕ್ಕೆ ಒಳಗಾಗುವಂತಾಗಿದೆ.
ಭಾನುವಾರ ಇದೇ ರೀತಿ ಪ್ಯಾನಲ್ ಕಿತ್ತು ಮಣ್ಣು ಕುಸಿದು ಬಿದ್ದಿರುವುದರಿಂದ ಗ್ರಾಮಸ್ಥರು ಸ್ಥಳಕ್ಕೆ ಎಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಕರೆಯಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧ ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿದ ಕೆಎಂವಿ ವತಿಯಿಂದ ಕೆಲಸ ಮಾಡಿಸಿದ ಗುತ್ತಿಗೆದಾರ ಸಂಪತ್, ಕೆಎಂವಿ ವತಿಯಿಂದ ಗುತ್ತಿಗೆ ಪಡೆದು ಅಲ್ಪ ಪ್ರಮಾಣದಲ್ಲಿ ನಾನೂ ಇಲ್ಲಿ ಕೆಲಸ ಮಾಡಿಸಿದ್ದೇನೆ.
ಇದು 50 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ. ನವಲೂರು ಗ್ರಾಮವನ್ನು ಬೇರ್ಪಡಿಸಿದಂತಾಗುತ್ತದೆ ಎಂದು ಗ್ರಾಮಸ್ಥರು ತಕರಾರು ತೆಗೆದಿದ್ದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಬ್ರಿಜ್ ಬಳಕೆ ಮಾಡುತ್ತ ಹೋದಂತೆ ಅದು ತಾಳಿಕೆ ಬರುತ್ತದೆ. ಪ್ಯಾನಲ್ ಗಳು ಕೂಡ ಬಳಕೆ ಮಾಡಿದಂತೆ ಮಣ್ಣಿನಲ್ಲಿ ಅಂಟಿಕೊಳ್ಳುತ್ತಿದ್ದವು.
ಆದರೆ, ಅದು ಬಳಕೆಯಾಗದೇ ಇರುವುದರಿಂದ ಈ ರೀತಿ ಆಗುತ್ತಿದೆ. ಈ ಬ್ರಿಜ್ ನ್ನು ಸಂಪೂರ್ಣ ನೆಲಸಮಗೊಳಿಸಿ ನವಲೂರು ಗ್ರಾಮಸ್ಥರಿಗೆ ಅನುಕೂಲಾಗುವಂತೆ ಕಾಮಗಾರಿ ನಡೆಸುವ ಬಗ್ಗೆ ಚಿಂತನೆಯೂ ನಡೆದಿದೆ ಎಂದರು.
Kshetra Samachara
20/09/2020 03:13 pm