ಹುಬ್ಬಳ್ಳಿ: ಮನುಷ್ಯ ಸ್ವಂತಕ್ಕೊಂದು ಸೈಟು, ಸ್ವಂತಕ್ಕೊಂದು ಮನೆ ಇರಬೇಕು ಎಂಬ ಆಸೆ ಪಡುವುದು ಸರ್ವೇಸಾಮಾನ್ಯ. ಆದರೆ, ಕೆಲವರು ಅಗತ್ಯಕ್ಕಿಂತ ಹೆಚ್ಚು ಸೈಟ್ ಖರೀದಿಸಿ ಅವುಗಳನ್ನು ಖಾಲಿ ಬಿಟ್ಟಿರುತ್ತಾರೆ. ಅಂತಹ ಸೈಟ್‌ಗಳು ಇದೀಗ ಅಕ್ಕಪಕ್ಕದ ನಿವಾಸಿಗಳು ಮತ್ತು ಹು-ಧಾ ಮಹಾನಗರ ಪಾಲಿಕೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಹೀಗಾಗಿ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದ ಮಾಲೀಕರ ವಿರುದ್ಧ ಹು-ಧಾ ಮಹಾನಗರ ಪಾಲಿಕೆ ಹೊಸ ಅಭಿಯಾನ ಆರಂಭಿಸಿದೆ.
ಹು-ಧಾ ಮಹಾನಗರದಲ್ಲಿ ಖಾಲಿ ಸೈಟ್‌ಗಳದ್ದೆ ದೊಡ್ಡ ಸಮಸ್ಯೆಯಾಗಿದೆ. ಊರು-ಕೇರಿಗಳಲ್ಲಿ ಖಾಲಿ ನಿವೇಶನ ಇರುವುದೇ ಕಸ ಹಾಕಲು ಎಂಬ ಭಾವನೆ ಇಂದು ಹಲವು ಸಮಸ್ಯೆಗಳಿಗೆ ದಾರಿಮಾಡಿಕೊಟ್ಟಿದೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನಿವೇಶನಗಳು ತಿಪ್ಪೆ ಗುಂಡಿಯಾಗಿ ಮಾರ್ಪಾಡಾಗುತ್ತಿವೆ. ಕ್ರಮೇಣವಾಗಿ ಖಾಲಿ ನಿವೇಶನದಲ್ಲಿ ಮುಳ್ಳು ಕಂಟಿಯ ಪೊದೆ ಬೆಳೆದು, ಬೀಡಾದಿ ದನ, ಹಂದಿ, ನಾಯಿಗಳ ಆಶ್ರಯ ತಾಣವಾಗುತ್ತಿದೆ. ಕೆಲವು ಕಡೆಗೆ ಬಯಲು ಶೌಚಾಲಯಕ್ಕೂ ಖಾಲಿ ಸೈಟ್‌ಗಳು ಬಳಕೆಯಾಗುತ್ತಿವೆ. ಪರಿಣಾಮ ದುರ್ವಾಸನೆ ಬೀರುತ್ತಿವೆ. ಸೊಳ್ಳೆಗಳ ನೆಲೆಯಾಗಿ ಇಡೀ ಪ್ರದೇಶದ ಆರೋಗ್ಯ ಕೆಡಿಸುತ್ತಿವೆ. ಈ ನಿಟ್ಟಿನಲ್ಲಿ ಪಾಲಿಕೆ ಕಾರ್ಯಾಚರಣೆಗೆ ಮುಂದಾಗಿದೆ.
ಇನ್ನೂ ಮೊದಲೇ ಹು-ಧಾ ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿರುವ ಸಂದರ್ಭದಲ್ಲಿ ನಗರದಲ್ಲಿನ ಖಾಲಿ ನಿವೇಶನಗಳು ಅವ್ಯವಸ್ಥೆ ಆಗರವಾಗಿ ಮಾರ್ಪಟ್ಟಿವೆ. ಹೀಗಾಗಿ ನಗರದಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಪಾಲಿಕೆ ನಮ್ಮ ನಗರ ಸ್ವಚ್ಛ ನಗರ ಎಂಬ ಅಭಿಯಾನ ಆರಂಭಿಸಿದೆ. ಈ ಮೂಲಕ ಖಾಲಿ ನಿವೇಶನಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ಕಾರ್ಯ ಮಾಡದ ಮಾಲೀಕರಿಗೆ ಪಾಲಿಕೆ ಪಾಠ ಕಲಿಸಲು ನಿರ್ಧಾರ ಮಾಡಿದ್ದು, ಈ ಹಿನ್ನೆಲೆಯಲ್ಲಿ ಅಂತಹ ನಿವೇಶನಗಳ ಮಾಲೀಕರಿಗೆ ನೋಟೀಸ್ ನೀಡಿದ್ದು, 7 ದಿನಗಳಲ್ಲಿ ತಮ್ಮ ಖಾಲಿ ನಿವೇಶನಗಳನ್ನು ಸ್ವಚ್ಚಗೊಳಿಸಿ, ಹಸ್ತುಬಸ್ತು ಮಾಡಿಕೊಳ್ಳಬೇಕು. ಒಂದೊಮ್ಮೆ ಖಾಲಿ ನಿವೇಶನಗಳನ್ನು ಮಾಲೀಕರು ಸ್ವಚ್ಚಗೊಳಿಸದೆ ಹಾಗೆಯೇ ಬಿಟ್ಟರೆ ಪಾಲಿಕೆಯೇ ಸ್ವಚ್ಚಗೊಳಿಸಲು ಕ್ರಮ ವಹಿಸಿ. ಅದಕ್ಕೆ ತಗಲುವ ವೆಚ್ಚವನ್ನು ಮಾಲೀಕರಿಂದ ಆಸ್ತಿ ಕಂದಾಯದ ಜತೆಗೆ ಖಾಲಿ ನಿವೇಶನದ ಸ್ವಚ್ಛತಾ ಶುಲ್ಕವಾಗಿ ವಸೂಲಿ ಮಾಡಲು ಮುಂದಾಗಿದೆ.
ಒಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳ ಆಗಮಿಸುತ್ತಿದ್ದಂತೆ ಕಾರ್ಯಾಚರಣೆ ಚುರುಕು ಮಾಡಿರುವ ಪಾಲಿಕೆ ಈಗ ಮಹತ್ವದ ನಿರ್ಧಾರವನ್ನು ಕೈಗೊಂಡಿರುವುದು ವಿಶೇಷವಾಗಿದೆ. ಹೀಗೆ ಅನಧಿಕೃತ, ಅಕ್ರಮ ಕಟ್ಟಡಗಳ ಹಾಗೂ ನಿವೇಶನಗಳಿಗೆ ಬ್ರೇಕ್ ಹಾಕುವ ಕಾರ್ಯವನ್ನು ಮಾಡಬೇಕಿದೆ.
Kshetra Samachara
01/06/2022 04:37 pm