ಹುಬ್ಬಳ್ಳಿ: ಮಹಾನಗರ ಪಾಲಿಕೆಯು ಕಳೆದ ಆರ್ಥಿಕ ವರ್ಷದಲ್ಲಿ (2021-22) ಶೇ. 73.96 ರಷ್ಟು ಕರ ಸಂಗ್ರಹಿಸಿದ್ದು, ಕಳೆದ ಬಾರಿಗಿಂತಲೂ ಶೇ. 1 ರಷ್ಟು ಕಡಿಮೆಯಾಗಿದೆ. 2020-21ರಲ್ಲಿ ಕೊರೊನಾ ಲಾಕ್‌ಡೌನ್ ಮಧ್ಯೆಯೂ ನಿಗದಿತ ಗುರಿ 97 ಕೋಟಿ ರೂ. ಗಳಲ್ಲಿ 71 ಕೋಟಿ ರೂ. ಪಾವತಿಯಾಗಿತ್ತು. ಈ ಸಲ ಅಷ್ಟೇನೂ ಯಾವ ನಿರ್ಬಂಧಗಳು ಮತ್ತು ಕೊರೊನಾ ಕೆಲಸ ಇಲ್ಲದಿದ್ದಾಗಲೂ ಕಡಿಮೆ ಟ್ಯಾಕ್ಸ್ ಸಂಗ್ರಹವಾಗಿದೆ.
ಹೌದು, ಪಾಲಿಕೆಯ 12 ವಲಯಗಳಲ್ಲಿ ನವನಗರ ವ್ಯಾಪ್ತಿಯ ವಲಯ ನಂ 2 ಅತಿ ಹೆಚ್ಚು ಶೇ 91.61 ರಷ್ಟು ಟ್ಯಾಕ್ಸ್ ಸಂಗ್ರಹಿಸುವ ಮೂಲಕ ಅತ್ಯುತ್ತಮ ವಲಯ ಎಂದು ಪ್ರಶಸ್ತಿಗೆ ಭಾಜನವಾಗಿದೆ. ಶೇ.83.73 ರಷ್ಟು ತೆರಿಗೆ ಸಂಗ್ರಹಿಸಿದ ವಲಯ ನಂ.1 ಎರಡನೇ ಸ್ಥಾನ ಗಳಿಸಿದೆ. ವಲಯ ನಂ 4- 83.59 ಟ್ಯಾಕ್ಸ್ ಸಂಗ್ರಹಿಸಿ ಮೂರನೇ ಸ್ಥಾನಗಳಿಸಿದೆ. ಶೇ 53.97 ರಷ್ಟು ಮಾತ್ರ ಕರ ಸಂಗ್ರಹಿಸಿದ ವಲಯ ನಂ.11 ಅತ್ಯಂತ ಕಳಪೆ ಸಾಧನೆ ಮಾಡಿದೆ. ಮೊದಲ ಮೂರು ವಲಯಗಳಿಗೆ ಪಾಲಿಕೆ ಆಯುಕ್ತರು ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ.
ಧಾರವಾಡ ವಿಭಾಗದ 1, 2, 3, 4 ಹಾಗೂ ನಂ. 12 ವಲಯಗಳು ಶೇ 80ಕ್ಕೂ ಹೆಚ್ಚು ಪ್ರಮಾಣದ ಕರ ಸಂಗ್ರಹಿಸಿರುವುದು ಕಂಡುಬಂದಿದೆ. ಹುಬ್ಬಳ್ಳಿ ವಿಭಾಗದ 8 ವಲಯಗಳ ಸರಾಸರಿ 60ರಷ್ಟು ಮಾತ್ರ ಕರ ವಸೂಲು ಮಾಡಿವೆ. ಮಾರ್ಚ್ 31ರವರೆಗಿನ ಪ್ರಕಾರ, ವಲಯ ನಂ.1-83.73, ವಲಯ ನಂ 2-91.61, ನಂ3-82.18, ನಂ. 4-83.59, ವಲಯ 5-73.08, ವಲಯ 6-82.72, 7 ರಲ್ಲಿ-65.53, ವಲಯ 8-63.37, ವಲಯ 9-60.64, ವಲಯ 10-61.63, ವಲಯ 11-53.97, ವಲಯ 12ರಲ್ಲಿ 80.26 ರಷ್ಟು ತೆರಿಗೆ ಸಂಗ್ರಹವಾಗಿದೆ.
2021-22ರ ಹಣಕಾಸು ವರ್ಷದಲ್ಲಿ ಗುರಿ ಹೊಂದಿದ್ದ 118.98 ಕೋಟಿ ರೂ.ಗಳಲ್ಲಿ 88.03 ಕೋಟಿ ರೂ. ಮಾತ್ರ ಆಸ್ತಿ ಕರ ಸಂಗ್ರಹಿಸಿದೆ. ಇನ್ನೂ 30.90 ಕೋಟಿ ರೂ, ತೆರಿಗೆ ಪಾವತಿಯಾಗಬೇಕಿದೆ. 2468 ವಾಣಿಜ್ಯ ಅಂಗಡಿ ಮುಂಗಟ್ಟುಗಳಿಂದ 4.30 ಕೋಟಿ ರೂ. (ಶೇ 90.45) ಕರ ಸಂಗ್ರಹಿಸಿದೆ. ಬಾಕಿ ಉಳಿಸಿಕೊಂಡ ಆಸ್ತಿ ತೆರಿಗೆ ಮೇಲೆ ವಿಧಿಸಿದ ದಂಡದ ರೂಪದಲ್ಲಿ 15.48 ಕೋಟಿ ರೂ.ಗಳನ್ನು ಪಾಲಿಕೆ ವಸೂಲು ಮಾಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ 163127 ರೆಸಿಡೆನ್ಸಿಯಲ್, 29866 ವಾಣಿಜ್ಯ ಹಾಗೂ 89,666 ಖಾಲಿ ಸೈಟ್‌ಗಳು ಸೇರಿ 2,82,656 ಆಸ್ತಿಗಳಿದ್ದು ಇವೆಲ್ಲವುಗಳು ತೆರಿಗೆ ವ್ಯಾಪ್ತಿಯ ಒಳಪಡುತ್ತವೆ.
ತೆರಿಗೆ ಸಂಗ್ರಹದಲ್ಲಿ ಕಳಪೆ ಸಾಧನೆ ಗಮನಿಸಿದ ಪಾಲಿಕೆ ಆಯುಕ್ತರು ಕಳದ ಎರಡು ತಿಂಗಳಿಂದ ವಾರಕ್ಕೊಮ್ಮೆ ವಲಯ ಅಧಿಕಾರಿಗಳು, ಬಿಲ್ ಕಲೆಕ್ಟರ್‌ಗಳ ಸಭೆ ಕರೆದು ವಾರದ ಗುರಿ ನಿಗದಿಪಡಿಸುತ್ತಿದ್ದರು. ಆಯಾ ವಾರ ಟ್ಯಾಕ್ಸ್ ಕಲೆಕ್ಷನ್ ಮಾಡದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅಲ್ಲದೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿದ ವಲಯಕ್ಕೆ ಪ್ರಶಂಸಾ ಪತ್ರ ನೀಡುವುದಾಗಿಯೂ ವಾಗ್ದಾನ ಮಾಡಿದ್ದರು. ಅದರಂತೆ ಈ ಬಾರಿ ಹೆಚ್ಚು ಟ್ಯಾಕ್ಸ್ ಕಲೆಕ್ಷನ್ ಮಾಡಿದ ವಲಯಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.
Kshetra Samachara
06/04/2022 01:04 pm