ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಒಂದಿಲ್ಲೊಂದು ರೀತಿಯಲ್ಲಿ ಮಹತ್ವದ ಕಾರ್ಯವನ್ನು ಕೈಗೆತ್ತಿಕೊಳ್ಳುವ ಮೂಲಕ ಜನಸ್ನೇಹಿ ಸೇವೆ ನೀಡುತ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಶ್ರಮಿಕ್ ಎಕ್ಸ್ಪ್ರೆಸ್ ಮೂಲಕ ಲಕ್ಷಾಂತರ ಕಾರ್ಮಿಕರನ್ನು ತವರೂರಿಗೆ ಕಳಿಸಿದ್ದ ನೈಋತ್ಯ ರೈಲ್ವೆ ಇಲಾಖೆ ಈಗ ಮತ್ತೊಂದು ದಾಖಲೆಯನ್ನು ನಿರ್ಮಾಣ ಮಾಡಿದೆ.
ಹುಬ್ಬಳ್ಳಿ ರೈಲ್ವೆ ವಿಭಾಗವು ಪಾರ್ಸಲ್ ಸಾಗಣೆಯಲ್ಲಿ ಉತ್ತಮ ಸಾಧನೆ ತೋರಿದೆ.ಜಾಗತಿಕ ಪಿಡುಗಿನ ಪ್ರತಿಕೂಲ ಪರಿಸ್ಥಿತಿ ಮಧ್ಯೆಯೂ ಹುಬ್ಬಳ್ಳಿ ವಿಭಾಗವು ಇದೇ ಸೆಪ್ಟೆಂಬರ್ ಅಂತ್ಯಕ್ಕೆ ಪಾರ್ಸಲ್ ಸಾಗಣೆಯಲ್ಲಿ ಒಟ್ಟು 2.06 ಕೋಟಿ ಆದಾಯಗಳಿಸಿದೆ.
ಅಕ್ಟೋಬರ್ ಮೊದಲ ವಾರದಲ್ಲಿ ವೇಳಾಪಟ್ಟಿಗೆ ಅನುಸಾರವಾಗಿ ಸಂಚರಿಸುವ ಪಾರ್ಸಲ್ ಎಕ್ಸ್ಪ್ರೆಸ್ಗಳಲ್ಲಿ ಒಟ್ಟು 1.786 ಕ್ವಿಂಟಾಲ್ ಸರಕನ್ನು ಗುವಾಹಟಿ ಮತ್ತು ಸಾಂಕರಾಯಿಲ್(ಕೊಲ್ಕತ್ತಾ) ಗೂಡ್ಸ್ ಟರ್ಮಿನಲ್ ಗಳಿಗೆ ಸಾಗಿಸಲಾಗಿದೆ. ಈ ಪಾರ್ಸಲ್ ವಿಶೇಷ ರೈಲುಗಳಲ್ಲಿ ನೆಸ್ಲೆ ಉತ್ಪನ್ನಗಳು,ಔಷಧಗಳು,ಶೈತ್ಯೀಕರಿಸಿದ ಮೀನುಗಳು ಮತ್ತು ಇತರ ಕೈಗಾರಿಕಾ ಸರಕುಗಳನ್ನು ಸಾಗಿಸಲಾಗುತ್ತಿದೆ.
ಪ್ರಯಾಣಿಕರು ರೈಲಿನಲ್ಲಿ ಆಸನಗಳನ್ನು ಕಾಯ್ದಿರಿಸುವ ಹಾಗೆಯೇ ಎಕ್ಸ್ ಪ್ರೆಸ್ ರೈಲುಗಳಲ್ಲಿ ಪಾರ್ಸಲ್ ಸಾಗಣೆಗೆ 120 ದಿನ ಮುಂಚಿತವಾಗಿಯೇ ಸ್ಥಳ ಕಾಯ್ದಿರಿಸಬಹುದಾದ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಆರಂಭಿಸಿದೆ. ಜನಸ್ನೇಹಿಯಾಗಿ ಕಾರ್ಯನಿರ್ವಸುತ್ತಿದ್ದ ನೈಋತ್ಯ ರೈಲ್ವೆ ಇಲಾಖೆ ಈಗ ಗ್ರಾಹಕ ಸ್ನೇಹಿಯಾಗಿ ತನ್ನ ವ್ಯಾಪ್ತಿ ವಿಸ್ತರಿಸಿದ್ದು,ಮತ್ತಷ್ಟು ಸೇವೆಯತ್ತ ನೈಋತ್ಯ ರೈಲ್ವೆ ದಾಪುಗಾಲು ಹಾಕುತ್ತಿದೆ.
Kshetra Samachara
27/10/2020 04:37 pm