ಕುಂದಗೋಳ : ಕಲಾ ಸರಸ್ವತಿಯನ್ನು ಆರಾಧಿಸಿ ಸಿದ್ಧಿಸಿಕೊಂಡ ಇಲ್ಲೊಬ್ಬ ರೈತಾಪಿ ಕುಟುಂಬದ ಕಲಾವಿದ ತನ್ನಲ್ಲಿರುವ ಕಲೆಯ ಮೂಲಕವೇ ಗ್ರಾಮೀಣ ಭಾಗದ ಹೆಸರನ್ನು ತರುವತ್ತ ಅವಕಾಶಗಳನ್ನು ಅರಸುತ್ತಿದ್ದಾನೆ.
ಹೌದು.. ಕುಂದಗೋಳ ತಾಲೂಕಿನ ವಿಠಲಾಪೂರ ಗ್ರಾಮದ ಲಿಂಗರಾಜ ಪಕ್ಕೀರಪ್ಪ ಬಾರಕೇರ ಎಂಬ ಈ ಕುವರ ಯಾವ ಚಿತ್ರ ನೋಡಿದ್ರೂ ಲೀಲಾಜಾಲವಾಗಿ ಚಿತ್ರಿಸಬಲ್ಲ. ಕಲೆಯ ಮಜಲನ್ನು ಅತಿ ಸೋಜಿಗವಾಗಿ ಅರಿತ ಈತ ಪ್ರಕೃತಿ, ವಿವಿಧ ಸಾಧಕರು, ದೇವಾನು ದೇವತೆಗಳು ಸೇರಿದಂತೆ ಪ್ರಪಂಚದಲ್ಲಿನ ಯಾವುದೇ ಚಿತ್ರವನ್ನು ಯಥಾವತ್ತಾಗಿ ಬಿಡಿಸುತ್ತಾನೆ. ಈತನ ಕಲೆ ನೋಡಿ ಸ್ನೇಹಿತರು ಕುಟುಂಬಸ್ಥರು ಸೇರಿದಂತೆ ಲಿಂಗರಾಜನ ಗುರು ಸುರೇಶ್ ಅರ್ಕಸಾಲಿಯವರಿಗೂ ಇಷ್ಟವಾಗಿ ಧಾರವಾಡದ ಪೈನ್ ಆರ್ಟ್ಸ್ ಕೋರ್ಸಿಗೆ ಪ್ರವೇಶಾತಿ ಕಲ್ಪಿಸಿದ್ದಾರೆ.
ಇಲ್ಲಿಯವರೆಗೆ ಮೂರು ಸಾವಿರಕ್ಕೂ ಅಧಿಕ ಚಿತ್ರ ಬಿಡಿಸಿರುವ ಈ ರೈತಾಪಿ ಬಡ ಕುಟುಂಬದ ಕಲಾವಿದನಿಗೆ ಅದೆಷ್ಟೋ ಪ್ರಶಸ್ತಿ, ಪುರಸ್ಕಾರ, ಪ್ರಶಂಸೆ ಬಂದಿದೆ. ಹೀಗಿದ್ರೂ ತನ್ನ ಕಾಲೇಜು ಶಿಕ್ಷಣ ಹಾಗೂ ಕಲಿಕೆಯ ಪರಿಕರಗಳಿಗಾಗಿ ಶಾಲಾ ಗೋಡೆಗಳಿಗೆ ಚಿತ್ರ ಬಿಡಿಸುವುದು, ಮೂರ್ತಿಗಳಿಗೆ ಬಣ್ಣ ಬಳಿಯುವುದು, ನಾಮಫಲಕ ಬರೆಯುವುದು, ಆಸಕ್ತ ಕಲಾ ಪ್ರೇಮಿಗಳಿಗೆ ಚಿತ್ರ ಬಿಡಿಸಿಕೊಟ್ಟು ಬಂದ ಪುಡಿಗಾಸಲ್ಲೇ ತನ್ನ ಕಲೆ ಕಲಿಕೆಯ ಬಂಡಿ ಮುನ್ನಡೆಸುತ್ತಿದ್ದಾನೆ.
ಒಂದಕ್ಕಿಂತ ಒಂದು ವಿಭಿನ್ನ ಎನಿಸುವ ರಾಶಿ ರಾಶಿ ಚಿತ್ರಗಳನ್ನು ಚಿತ್ರಿಸುವ ಲಿಂಗರಾಜನಿಗೆ ತಾಯಿಯೇ ಮೊದಲು ಗುರು ಆಗಿ ಅವರ ಪ್ರೇರಣೆಯಿಂದಲೇ ಹೊಸ ಅವಕಾಶಗಳ ಎದುರು ನೋಡುತ್ತಿರುವ ಹಳ್ಳಿ ಪ್ರತಿಭೆಗೆ ಪ್ರೋತ್ಸಾಹ ಬೇಕಾಗಿದೆ. ಕಲಾವಿದ ಲಿಂಗರಾಜ ಬಾರಕೇರ ಮೊಬೈಲ್ ಸಂಖ್ಯೆ 7483648638 ಗೆ ಕರೆ ಮಾಡಿ ಅವಕಾಶ ನೀಡಬಹುದು.
ಪಬ್ಲಿಕ್ ನೆಕ್ಸ್ಟ್ ವಿಶೇಷ, ಶ್ರೀಧರ ಪೂಜಾರ, ಕುಂದಗೋಳ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/06/2022 04:23 pm