ನವಲಗುಂದ : ನವಲಗುಂದದಿಂದ ಧಾರವಾಡದ ಕಡೆಗೆ ಹೊರಟಿದ್ದ ಬಸ್ ನಲ್ಲಿ ವ್ಯಕ್ತಿಯೊಬ್ಬರು ಕಳೆದುಕೊಂಡ ಅರವತ್ತು ಸಾವಿರ ಹಣವನ್ನು ಬಸ್ಸಿನ ಸಿಬ್ಬಂದಿಗಳು ಆ ವ್ಯಕ್ತಿಗೆ ಮರಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೆ.ಎ 25 ಎಫ್ 3135 ನಂಬರಿನ ನವಲಗುಂದ ಧಾರವಾಡ ಬಸ್ ನಲ್ಲಿ ನವಲಗುಂದ ತಾಲ್ಲೂಕಿನ ಕರ್ಲವಾಡ ಗ್ರಾಮದ ಮುತ್ತಣ್ಣ ಹಳ್ಯಾಳ ಎಂಬುವವರು ಸುಮಾರು 60 ಸಾವಿರ ಹಣ ಮತ್ತು ಇನ್ನಿತರ ಕಾಗದ ಪತ್ರಗಳಿದ್ದ ಬ್ಯಾಗ್ ಮರೆತು ಹೋಗಿದ್ದರು. ಬ್ಯಾಗನ್ನು ಗಮನಿಸಿದ ಚಾಲಕರಾದ ಎಂ.ಜಿ ತಳವಾರ ಹಾಗೂ ನಿರ್ವಾಹಕರಾದ ರಾಮಚಂದ್ರಪ್ಪ ಬ್ಯಾಳಿ ಅವರು ಬ್ಯಾಗನ್ನು ಮಾಲೀಕರಿಗೆ ಮರಳಿಸಿದ್ದಾರೆ.
ಹಣವನ್ನು ಭದ್ರತಾ ಸಿಬ್ಬಂದಿ ಡಿ.ಎಸ್ ಚಲ್ಲಾ ಹಾಗೂ ಘಟಕ ವ್ಯವಸ್ಥಾಪಕರಾದ ಮಹೇಶ್ವರಿ ಅವರ ಮುಖಾಂತರ ಮುತ್ತಣ್ಣ ಹಳ್ಯಾಳ ಅವರಿಗೆ ಮರಳಿಸಿದರು. ಈ ವೇಳೆ ಕರ್ಲವಾಡ ಗ್ರಾಮಸ್ಥರಾದ ಚಂದ್ರು ಕುಂದಗೋಳ ಸೇರಿದಂತೆ ಘಟಕ ಸಿಬ್ಬಂದಿ ಇದ್ದರು.
Kshetra Samachara
13/04/2022 08:11 pm