ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಚೆಂಬೆಳಕಿನ ಕವಿ ಡಾ.ಚೆನ್ನವೀರ ಕಣವಿ ಅಸ್ತಂಗತ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಜನನ: ಜೂನ್ 28, 1928

ಮರಣ: ಫೆಬ್ರುವರಿ 16, 2022

ಧಾರವಾಡ: ವಿಶ್ವ ವಿನೂತನ ವಿದ್ಯಾ ಚೇತನ.. ಹಾಡಿನ ಸಾಹಿತ್ಯಕಾರ, ಚೆಂಬೆಳಕಿನ ಕವಿ, ನಾಡಿನ ಹೆಸರಾಂತ ಹಿರಿಯ ಕವಿ ಡಾ.ಚೆನ್ನವೀರ ಕಣವಿ ಅನಾರೊಗ್ಯದಿಂದ ವಿಧಿವಶರಾಗಿದ್ದಾರೆ.

ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28 ರಂದು ಜನಿಸಿದ್ದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಧಾರವಾಡದಲ್ಲಿಯೇ ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣ ಪೂರೈಸಿ ಕಣವಿಯವರು 1952 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು. 1956 ರ ವೇಳೆಗೆ ಅದೇ ವಿಭಾಗದ ನಿರ್ದೇಶಕರಾಗಿ 1983 ರವರೆಗೆ ಸೇವೆ ಸಲ್ಲಿಸಿದ್ದರು. ಅವರ ಪತ್ನಿ ಶಾಂತಾದೇವಿ ಅವರು ಕೂಡ ಸಾಹಿತ್ಯ ಸಂಸ್ಕೃತಿಯ ಒಲವುಳ್ಳ ದೊಡ್ಡ ಮನೆತನದಿಂದ ಬಂದವರಾಗಿದ್ದರು.

ಚೆನ್ನವೀರ ಕಣವಿಯವರು ವಿಮರ್ಶೆಯನ್ನು ಬರೆದಿದ್ದರಾದರೂ ಪ್ರಧಾನವಾಗಿ ಅವರು ಕವಿಯಾಗಿ ಪ್ರಕಟವಾಗಿದ್ದು ನವೋದಯದ ‘ನಡುಹಗಲ’ ಕಾಲದಲ್ಲಿ. ಬೇಂದ್ರೆ, ಕುವೆಂಪು, ಪು.ತಿ.ನ, ಮಧುರಚೆನ್ನ ಮೊದಲಾದವರ ಕಾವ್ಯ ಹೊಸದಾಗಿ ಕಾವ್ಯ ರಚನೆಗೆ ತೊಡಗುವವರನ್ನು ಗಾಢವಾಗಿ ಪ್ರಭಾವಿಸುತ್ತಿದ್ದ ಕಾಲವದು. ಕಣವಿ ಅವರ ಪ್ರಾರಂಭದ ರಚನೆಗಳಲ್ಲಿ ಇಂತಹ ಪ್ರಭಾವಗಳ ನೆಲೆಯನ್ನು ಗುರುತಿಸಬಹುದಾಗಿದ್ದು, ಅವರ ಕಾವ್ಯದಲ್ಲಿ ರಮ್ಯ ಮನೋಧರ್ಮ, ಆದರ್ಶಪ್ರಿಯತೆ, ವ್ಯಕ್ತಿತ್ವ ನಿರ್ಮಾಣದ ಹಂಬಲಗಳು ವಿಶೇಷವಾಗಿ ಕಂಡು ಬರುತ್ತವೆ. 1949 ರಲ್ಲಿ ಪ್ರಕಟವಾದ ‘ಕಾವ್ಯಾಕ್ಷಿ’, 1950 ರಲ್ಲಿ ಪ್ರಕಟವಾದ ‘ಭಾವಜೀವಿ’ ಸಂಗ್ರಹಗಳಲ್ಲಿ ಈ ಎಲ್ಲ ಅಂಶಗಳನ್ನೂ ಗುರುತಿಸಬಹುದು. ಪ್ರತಿಮಾನಿಷ್ಠ ಕವಿತೆ ಸಂಪಾದಿಸಿ 1953 ರಲ್ಲಿ ಕಣವಿಯವರ ಮೂರನೆಯ ಸಂಗ್ರಹ ‘ಆಕಾಶಬುಟ್ಟಿ’ ಪ್ರಕಟವಾಯಿತು. ಈ ಸಂಗ್ರಹದಲ್ಲಿ ಕಣವಿ ಅವರ ಆಸಕ್ತಿಗಳು ವಿಸ್ತಾರಗೊಳ್ಳುತ್ತಿರುವ ಸೂಚನೆಗಳಿವೆ. ಸಾಮಾಜಿಕತೆ ಈ ಸಂಗ್ರಹದಲ್ಲಿ ಗುರುತಿಸಲೆಬೇಕಾದ ಬಹುಮುಖ್ಯ ಅಂಶವಾಗಿದೆ. ಸಮಾಜದ ದೋಷಗಳನ್ನು ಕವಿ ಇಲ್ಲಿ ವ್ಯಗ್ರರಾಗಿ ಟೀಕೆಗೆ ಗುರಿ ಮಾಡುತ್ತಾರೆ. ವ್ಯಂಗ್ಯದ ಧಾಟಿ ಇಂತಹ ಸಂದರ್ಭಗಳಲ್ಲಿ ಮುಖ್ಯವಾಗುತ್ತದೆ.

ಬಸವರಾಜ ಕಟ್ಟಿಮನಿ, ನಿರಂಜನ, ಯಕ್ಕುಂಡಿ ಮೊದಲಾದವರ ಸ್ನೇಹ ಸಂಪರ್ಕ ಮತ್ತು ಆಗ ಪ್ರಚಲಿತವಿದ್ದ ಪ್ರಗತಿಶೀಲ ಸಾಹಿತ್ಯ ಚಳವಳಿ ಅವರನ್ನು ಪ್ರಭಾವಿಸಿತ್ತು. ಆಕಾಶಬುಟ್ಟಿ ಸಂಗ್ರಹದಲ್ಲಿರುವ ಪ್ರಜಾಪ್ರಭುತ್ವ ಎಂಬ ಕವಿತೆಯನ್ನು ನಾವಿಲ್ಲಿ ವಿಶೇಷವಾಗಿ ನೆನೆಯಬೇಕು. ಪ್ರತಿಮಾನಿಷ್ಠವಾದ ಈ ಕವಿತೆ ಕಣವಿ ಅವರ ಮುಂದಿನ ಕಾವ್ಯದ ಮುನ್ಸೂಚನೆಯಂತಿದೆ.

ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ, ಮಣ್ಣಿನ ಮೆರವಣಿಗೆ, ದಾರಿ ದೀಪ, ನೆಲ ಮುಗಿಲು, ಎರಡು ದಡ, ನಗರದಲ್ಲಿ ನೆರಳು, ಜೀವಧ್ವನಿ, ಕಾರ್ತೀಕದ ಮೋಡ, ಜೀನಿಯಾ, ಹೊಂಬೆಳಕು, ಶಿಶಿರದಲ್ಲಿ ಬಂದ ಸ್ನೇಹಿತ, ಚಿರಂತನ ದಾಹ(ಆಯ್ದ ಕವನಗಳು),

ಹೂವು ಹೊರಳುವವು, ಸೂರ್ಯನ ಕಡೆಗೆ ಎಂಬ ಕಾವ್ಯ ಸಂಕಲನ ರಚನೆ ಮಾಡಿದ್ದರು. ಸಾಹಿತ್ಯ ಚಿಂತನ, ಕಾವ್ಯಾನುಸಂಧಾನ,

ಸಮಾಹಿತ, ಮಧುರಚೆನ್ನ, ಸಮತೋಲನ ಎಂಬ ವಿಮರ್ಶಾ ಲೇಖನ ಹಾಗೂ ಪ್ರಬಂಧ ರಚಿಸಿದ್ದರು.

ಹಕ್ಕಿ ಪುಕ್ಕ, ಚಿಣ್ಣರ ಲೋಕವ ತೆರೆಯೋಣ ಎಂಬ ಮಕ್ಕಳ ಸಾಹಿತ್ಯಕ್ಕೂ ಕಣವಿ ಕೊಟ್ಟ ಕೊಡುಗೆ ಅನನ್ಯ.

ಇವರ "ಜೀವಧ್ವನಿ" ಎಂಬ ಕೃತಿಗೆ 1981 ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. 1996 ರಲ್ಲಿ ಹಾಸನದಲ್ಲಿ ನಡೆದ 65ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಣವಿಯವರು ಅಧ್ಯಕ್ಷರಾಗಿದ್ದರು ಎಂಬುದು ಧಾರವಾಡದ ಹೆಮ್ಮೆ.

ಆಳ್ವಾಸ್ -ನುಡಿಸಿರಿ 2008 "ರ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಬಸವ ಗುರು ಕಾರುಣ್ಯ ಪ್ರಶಸ್ತಿ, ನಾಡೋಜ ಪ್ರಶಸ್ತಿ,

ಕರ್ನಾಟಕ ಕವಿರತ್ನ ಪ್ರಶಸ್ತಿ, ಅನಕೃ ನಿರ್ಮಾಣ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಕಣವಿಯವರ ಸಾಧನೆಗೆ ಸಿಕ್ಕ ಗೌರವಗಳು.

2003 ರಲ್ಲಿ ನಾಡೋಜ ಮತ್ತು ಪಂಪ ಪ್ರಶಸ್ತಿ ವಿಜೇತರಾಗಿದ್ದರು. 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದರು. ಕಣವಿ ಅವರ ಈ ನಿಧನದಿಂದಾಗಿ ಇಡೀ ಸಾಹಿತ್ಯ ಮತ್ತು ಕಾವ್ಯ ಲೋಕ ಬಡವಾಗಿದೆ. ಧಾರವಾಡ ಸಾಹಿತ್ಯ ಲೋಕದ ಕೊಂಡಿ ಕಳಚಿ ಇತಿಹಾಸ ಪುಟ ಸೇರಿದಂತಾಗಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/02/2022 03:17 pm

Cinque Terre

107.86 K

Cinque Terre

2

ಸಂಬಂಧಿತ ಸುದ್ದಿ