ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾವ್ಯ ಸಂಗ ಮುಗಿಸಿದ ಐರಸಂಗ: ಸೈಕಲ್ ಸಾಹಿತಿಗೆ ನುಡಿನಮನ

ಸೈಕಲ್ ಸಾಹಿತಿ, ಹೃದಯ ಬೆಂದ ಕವಿ, ತೆರೆಮರೆಯ ಕಾವ್ಯ ತಪಸ್ವಿ, ಖ್ಯಾತಿ ಬಯಸದ ಕವಿ. ಹೀಗೆ ಅನೇಕ ರೀತಿ ಧಾರವಾಡದ ಸಾರಸ್ವತಲೋಕದಲ್ಲಿ ಕರೆಯಲ್ಪಡುತ್ತಿದ್ದ ಹಿರಿಯ ಕವಿ ಡಾ. ವಿ ಸಿ ಐರಸಂಗ ಇನ್ನಿಲ್ಲವಾಗಿದ್ದಾರೆ. ಬದುಕಿನುದ್ದಕ್ಕೂ ಸರಳತೆಯನ್ನೇ ಉಸಿರಾಡಿದ ಕಾಡು ಕುಸುಮದಂತಹ ತೆರೆಮರೆಯ ಪ್ರತಿಭೆ ಡಾ. ವೀರಭದ್ರಪ್ಪ ಚೆನ್ನಪ್ಪ ಐರಸಂಗ.

ಸರಳತೆಯ ಪ್ರತೀಕದಂತಿದ್ದು ಸರಳತೆಯನ್ನೇ ಆರಾಧಿಸುತ್ತಿದ್ದ ಡಾ. ಐರಸಂಗರು ತಮ್ಮ ವೃದ್ಧಾಪ್ಯದಲ್ಲೂ ಸೈಕಲ್ ಮೇಲೆಯೇ ಸಂಚರಿಸುತ್ತಿದ್ದರು. ತಾವೇ ಬರೆದ ಕವನ ಸಂಕಲನಗಳನ್ನು ಮಾರುತಿ ಪ್ರಕಾಶನ ಎಂಬ ತಮ್ಮದೇ ಪ್ರಕಾಶನ ಸಂಸ್ಥೆಯ ಮೂಲಕ ಪ್ರಕಟಿಸುತ್ತಿದ್ದರು‌. ಹೀಗೆ ತಾವೇ ಪ್ರಕಟಿಸಿದ ಆ ಪುಸ್ತಕಗಳನ್ನು ಸೈಕಲ್ ಮೇಲಿಟ್ಟು ಹಿತೈಷಿಗಳಿಗೆ , ಸ್ನೇಹಿತರಿಗೆ ಹಂಚುತ್ತಿದ್ದರು.‌ ಜೊತೆಗೆ ಉದಯೋನ್ಮುಖ ಸಂಗೀತಗಾರರನ್ನು ಹುಡುಕಿ ಅವರ ಕೈಗೆ ತಮ್ಮ ಕವನಗಳನ್ನಿಟ್ಟು ಅದಕ್ಕೆ ರಾಗ ಸಂಯೋಜಿಸುವಂತೆ ಕೋರುತ್ತಿದ್ದರು.

ಧಾರವಾಡದ ಹೆಸರಾಂತ ಸುಗಮ ಸಂಗೀತಗಾರರಾದ ಅನುರಾಧಾ ಧಾರೇಶ್ವರ, ಶ್ರೀಕಾಂತ್ ಕುಲಕರ್ಣಿ ಹಾಗೂ ಹಲವು ಸಂಗೀತಗಾರರು ಇವರ ಕವಿತೆಗಳಿಗೆ ಲಯಬದ್ಧ ಸಂಗೀತ ಕೊಟ್ಟು ಹಾಡಿದ್ದಾರೆ. ಭವಬಂಧನ ಕಳೆಯಬಲ್ಲ ಆ ಭಾವಗೀತೆಗಳು ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಪ್ರಸಾರವಾಗಿವೆ. ಇವರ ಸಮಗ್ರ ಸಾಹಿತ್ಯ ಸೇವೆ ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿದೆ.

ಕೇಳಿದವರಿಗೆ ಉಚಿತ ಪುಸ್ತಕ- ಸುಮಾರು ವರ್ಷಗಳ ಹಿಂದೆ ಧಾರವಾಡದಲ್ಲಿ ಜಿಲ್ಲಾ ಉತ್ಸವ ನಡೆದಿತ್ತು‌. ಕೆಸಿಡಿ ಮೈದಾನದಲ್ಲಿ ಸಣ್ಣ ತಾಡಪತ್ರಿ ಹಾಸಿಕೊಂಡು ಅದರ ಮೇಲೆ ತಾವೇ ಬರೆದ ಪುಸ್ತಕಗಳನ್ನು ಜೋಡಿಸಿಟ್ಟು ಕೂತಿದ್ದರಂತೆ. ಅಲ್ಲಿ ಸಾಹಿತ್ಯಾಸಕ್ತರಿಗೆ ಇಷ್ಟವಾದ ಪುಸ್ತಕಗಳನ್ನು ಐರಸಂಗರು ಉಚಿತವಾಗಿ ನೀಡಿದ್ದರು. ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಐರಸಂಗರು ತಮ್ಮ ಮನೆಯಿಂದ ಸಮ್ಮೇಳನ ಮುಖ್ಯ ವೇದಿಕೆಗೆ ತಮ್ಮ‌ ಸೈಕಲ್ ತುಳಿದುಕೊಂಡೇ ಬಂದಿದ್ದರು. ಇದು ಐರಸಂಗರ ಸರಳ ಸಜ್ಜನಿಕೆಗೆ ಕೆಲವು ಉದಾಹರಣೆಗಳು.

-ನಾಗರಾಜ್ ತಳುಗೇರಿ

Edited By : Nagaraj Tulugeri
Kshetra Samachara

Kshetra Samachara

14/11/2020 09:34 pm

Cinque Terre

69.69 K

Cinque Terre

9

ಸಂಬಂಧಿತ ಸುದ್ದಿ