ಹುಬ್ಬಳ್ಳಿ: ಬಡರೋಗಿಗಳ ಪಾಲಿನ ಸಂಜೀವಿನಿ ಎಂದೇ ಖ್ಯಾತವಾಗಿರುವ ಕಿಮ್ಸ್ ಆಸ್ಪತ್ರೆ ಇದೀಗ ಮೊದಲ ಬಾರಿಗೆ ಕಿಡ್ನಿ ಕಸಿ ಮಾಡಿ ಯುವಕನ ಜೀವವನ್ನು ಉಳಿಸಿದೆ. ಅಷ್ಟೇ ಅಲ್ಲದೇ ಮತ್ತೊಂದು ಚಮತ್ಕಾರಿ ಚಿಕಿತ್ಸೆ ಮಾಡುವ ಮೂಲಕ, ಸರ್ಕಾರಿ ಆಸ್ಪತ್ರೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲ ಎನ್ನುವುದನ್ನು ಸಾಬೀತು ಮಾಡಿದೆ. ಅಷ್ಟಕ್ಕೂ ಆ ಸಾಧನೆ ಬಗ್ಗೆ ಹೇಳ್ತೀವಿ ಕೇಳಿ..
ಹೌದು, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಜನರು ಕಿಡ್ನಿ ಕಸಿ ಮಾಡಿಸಿಕೊಳ್ಳಲು ಬೆಂಗಳೂರಿನಂತಹ ದೂರದ ಸ್ಥಳಗಳಿಗೆ ಹೋಗುವ ಅನಿವಾರ್ಯತೆ ಈ ಹಿಂದಿತ್ತು. ಜೊತೆಗೆ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂ.ಖರ್ಚು ಮಾಡಬೇಕಿತ್ತು. ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆಯಲೂ ಆಗದೆ ಸಾಕಷ್ಟು ಬಡ ಜನರು ಸಾವಿಗೀಡಾದ ಉದಾಹರಣೆಗಳಿದ್ದವು. ಈ ದಿಸೆಯಲ್ಲಿ ಕಿಮ್ಸ್ ಆಡಳಿತ ಮಂಡಳಿ ಕಿಮ್ಸ್ ನಲ್ಲಿಯೇ ಕಿಡ್ನಿ ಕಸಿ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತು. ಅದರಂತೆ ಸರ್ಕಾರ ಕಳೆದ ಫೆಬ್ರವರಿ 18 ರಂದು ಕಿಡ್ನಿ ಕಸಿಗೆ ಅನುಮತಿ ನೀಡಿತ್ತು. ಈ ಮೂಲಕ ಕಿಡ್ನಿ ಕಸಿಗೆ ಅನುಮತಿ ಪಡೆದ ರಾಜ್ಯದ ಏಕೈಕ ಸರ್ಕಾರಿ ಮೆಡಿಕಲ್ ಕಾಲೇಜು ಎಂಬ ಹೆಗ್ಗಳಿಕೆ ಪಡೆದುಕೊಂಡಿತ್ತು. ಅದರಂತೆ ಇದೀಗ ತಾಯಿ ದಾನ ಮಾಡಿದ ಮೂತ್ರಪಿಂಡ (ಕಿಡ್ನಿ) ವನ್ನು 22 ವರ್ಷದ ಮಗನಿಗೆ ಯಶಸ್ವಿಯಾಗಿ ಆಪರೇಷನ್ ಮಾಡಿ ತಾಯಿ ಮಗ ಆರೋಗ್ಯವಾಗಿರುವಂತೆ ಮಾಡಿದೆ.
ಒಂದು ಸಾರಿ ಕಿಡ್ನಿ ಕಸಿ ಮಾಡುವುದರಿಂದ ಸುಮಾರು 10 ವರ್ಷ ಬದುಕಬಹುದು. ಅದೇ ರೀತಿ ರೋಗಿಯೂ ಕೂಡ ಆರೋಗ್ಯ ಕಾಪಾಡಿಕೊಂಡರೆ ಇನ್ನೂ ಹೆಚ್ಚಿನ ವರ್ಷ ಬದುಕಬಹುದು ಎಂದು ಕಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಹೇಳುತ್ತಾರೆ...
ಒಟ್ಟಿನಲ್ಲಿ ಉತ್ತರ ಕರ್ನಾಟಕದ ಬಡವರ ಪಾಲಿನ ಸಂಜೀವಿನಿ ಎಂದು ಖ್ಯಾತಿ ಹೊಂದಿರುವ ಕಿಮ್ಸ್ ಆಸ್ಪತ್ರೆ ಒಂದಿಲ್ಲೊಂದು ಸಾಧನೆ ಮಾಡುತ್ತಿದೆ. ಯಾರಾದರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರೆ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತವಾದ ಚಿಕಿತ್ಸೆ ಪಡೆದು ತಮ್ಮ ಜೀವನವನ್ನು ಕಾಪಾಡಿಕೊಳ್ಳಬಹುದು.....
Kshetra Samachara
25/04/2022 01:58 pm