ಧಾರವಾಡ: ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಗೆ ಎಲ್ಲ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಅದು 2022ರ ಏಪ್ರಿಲ್ 1ರಿಂದ ಉನ್ನತೀಕರಿಸಿದ ಮಾನಸಿಕ ಆರೋಗ್ಯ ಆಸ್ಪತ್ರೆ ಕೇಂದ್ರವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಒಂದು ವೇಳೆ ಇದು ಸಾಧ್ಯವಾಗದಿದ್ದರೆ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ.
ಡಿಮಾನ್ಸ್‌ಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದ ವಿಚಾರವಾಗಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ 1996ರಲ್ಲಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಬೆಳಿಗ್ಗೆ ವಿಚಾರಣೆ ಕೈಗೆತ್ತಿಕೊಂಡಾಗ ಡಿಮಾನ್ಸ್ ಪರ ವಕೀಲರು, ನ್ಯಾಯಾಲಯದ ಆದೇಶದಂತೆ ಆಸ್ಪತ್ರೆಯನ್ನು ಉನ್ನತೀಕರಿಸುವ ಕಾರ್ಯ ಪ್ರಗತಿಯಲ್ಲಿದೆ. ಅದಕ್ಕೆ ಸ್ವಲ್ಪ ಸಮಯ ಬೇಕು ಎಂದರು. ಆಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಎಲ್ಲವನ್ನೂ ಕೋರ್ಟ್ ಹೇಳಬೇಕೇ? ಇಲ್ಲವಾದರೆ ಏನೂ ಕೆಲಸ ಮಾಡುವುದಿಲ್ಲೇ ಎಂದು ತರಾಟೆಗೆ ತೆಗೆದುಕೊಂಡಿತು.
ಎಂಆರ್‌ಐ ಯಂತ್ರ ಅಳವಡಿಕೆ ಕಾರ್ಯವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಡಿಮಾನ್ಸ್‌ನ್ನು ಉನ್ನತ ಮಾನಸಿಕ ಆರೋಗ್ಯ ವಿಜ್ಞಾನಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಏಪ್ರಿಲ್ 1ರಿಂದ ಕಾರ್ಯನಿರ್ವಹಿಸುವಂತೆ ಮಾಡಬೇಕು. ಇಲ್ಲವಾದರೆ ಮುಂದಿನ ವಿಚಾರಣೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾಗಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿ ವಿಚಾರಣೆಯನ್ನು ಏ.5ಕ್ಕೆ ಮುಂದೂಡಿತು.
Kshetra Samachara
09/03/2022 11:23 am