ಧಾರವಾಡ: ಕೋವಿಡ್ ನಿಯಂತ್ರಣಕ್ಕಾಗಿ ಧಾರವಾಡ ಜಿಲ್ಲೆಯಾದ್ಯಂತ ನಾಳೆ ಸೆ.29 ರಂದು ಮತ್ತೊಂದು ಸುತ್ತಿನ ಲಸಿಕಾ ಮೇಳವನ್ನು ಆಯೋಜಿಸಲಾಗಿದೆ. ಜಿಲ್ಲೆಯ ಜನತೆ ಕೋವಿಡ್ ಮೊದಲ ಮತ್ತು ಎರಡನೇ ಡೋಸ್‍ಗಳನ್ನು ಪಡೆದು ಆರೋಗ್ಯ ರಕ್ಷಿಸಿಕೊಳ್ಳಬೇಕು ಹಾಗೂ ಕೋವಿಡ್ ನಿರ್ಮೂಲನೆ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಮನವಿ ಮಾಡಿದ್ದಾರೆ.
ಈ ಕುರಿತು ಇಂದು ಸಂಜೆ ಜಿಲ್ಲೆಯ ಆರೋಗ್ಯ, ಕಂದಾಯ ಮತ್ತು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದದ ಮೂಲಕ ಸಭೆ ನಡೆಸಿ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಕಳೆದ ಸೆ.17 ರಂದು ನಡೆದ ಬೃಹತ್ ಲಸಿಕಾ ಮೇಳದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸುಮಾರು 1 ಲಕ್ಷ 11 ಸಾವಿರ ಜನರಿಗೆ ಲಸಿಕೆ ನೀಡಿ, ರಾಜ್ಯದಲ್ಲಿಯೇ ಉತ್ತಮ ಪ್ರಗತಿ ಸಾಧಿಸಿದ ಮೊದಲ ಮೂರು ಜಿಲ್ಲೆಗಳಲ್ಲಿ ಧಾರವಾಡಕ್ಕೆ ಸ್ಥಾನ ತಂದುಕೊಟ್ಟಿರುವಿರಿ. ನಿರಂತರವಾಗಿ ಇಂತಹ ಪ್ರಯತ್ನಗಳನ್ನು ಮಾಡುವ ಮೂಲಕ ಜಿಲ್ಲೆಯ ಜನತೆಗೆ ತಕ್ಕ ಪ್ರಮಾಣದಲ್ಲಿ ತ್ವರಿತವಾಗಿ ಲಸಿಕೆಗಳನ್ನು ನೀಡಲು ಸಾಧ್ಯವಾಗುತ್ತದೆ. ನಾಳೆ ಸೆ.29 ರಂದು ಬೆಳಿಗ್ಗೆ 7 ಗಂಟೆಯಿಂದ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗಗಳ ಸುಮಾರು 251 ಸ್ಥಳಗಳಲ್ಲಿ ಲಸಿಕಾಕರಣ ನಡೆಯಲಿದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನು ನೀಡಲಾಗುವುದು.
ಇದುವರೆಗೂ ಯಾವುದೇ ಲಸಿಕೆ ಪಡೆಯದ ವ್ಯಕ್ತಿಗಳು, ಕೋವಿಶೀಲ್ಡ್ ಮೊದಲ ಡೋಸ್ ಪಡೆದು 84 ದಿನಗಳಾದವರು ಹಾಗೂ ಕೋವ್ಯಾಕ್ಸಿನ್ ಲಸಿಕೆ ಪಡೆದು 28 ದಿನಗಳಾದವರು 2 ನೇ ಡೋಸಿನ ಲಸಿಕೆ ಪಡೆಯಬಹುದು. ಮಾಸ್ಕ್ ಧರಿಸುವುದು, ಕೈಗಳ ಸ್ವಚ್ಛತೆ ಹಾಗೂ ದೈಹಿಕ ಅಂತರ ಕಾಪಾಡಿಕೊಳ್ಳುವದರ ಜೊತೆಗೆ ಲಸಿಕೆಯನ್ನು ಪಡೆದುಕೊಂಡವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಕೋವಿಡ್ ನಿಯಂತ್ರಿಸಲು ಇದು ಸಹಕಾರಿ. ಜಿಲ್ಲೆಯ ವೈದ್ಯಾಧಿಕಾರಿಗಳು, ಕಂದಾಯ, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ನಾಳೆ ನಡೆಯುವ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹೆಚ್ಚು ಜನರಿಗೆ ಲಸಿಕೆ ಹಾಕಬೇಕು. ಲಸಿಕಾಕರಣ ತಂಡಗಳು ತಮ್ಮ ವ್ಯಾಪ್ತಿಯ ಸ್ಥಳಗಳಲ್ಲಿ ಲಸಿಕಾ ಕೇಂದ್ರಕ್ಕೆ ಬರಲು ಸಾಧ್ಯ ಇಲ್ಲದಂತಹ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರು ಇದ್ದರೆ ಅವರನ್ನು ಗುರುತಿಸಿ, ಸಮಯ ನಿಗದಿಪಡಿಸಿ ಅವರಿರುವ ಸ್ಥಳಗಳಿಗೆ ತೆರಳಿ ಲಸಿಕೆ ನೀಡಬಹುದು. ಒಟ್ಟಾರೆಯಾಗಿ ಹೆಚ್ಚು ಜನರಿಗೆ ಲಸಿಕೆ ನೀಡುವುದು ನಮ್ಮ ಗುರಿಯಾಗಿದೆ ಎಂದು ಅವರು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎಸ್.ಎಂ.ಹೊನಕೇರಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Kshetra Samachara
28/09/2021 07:24 pm