ಧಾರವಾಡ: ಕೊರೊನಾ ಸೋಂಕು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಂತೂ ಪಾಸಿಟಿವಿಟಿ ರೇಟ್ ಶೂನ್ಯಕ್ಕೆ ಬಂದಿದೆ. ಜನ ಕೂಡ ಜಾಗೃತಗೊಂಡು ಮುನ್ನೆಚ್ಚರಿಕಾ ಕ್ರಮವಾಗಿ ವ್ಯಾಕ್ಸಿನ್ ಕೂಡ ಹಾಕಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ರಾಜ್ಯ ಸರ್ಕಾರ ಇನ್ನೂ ನೈಟ್ ಕರ್ಫ್ಯೂ ಮುಂದುವರೆಸಿದೆ. ರಾತ್ರಿ 9 ಗಂಟೆಗೆ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಬಂದ್ ಮಾಡುವ ನಿಯಮವನ್ನು ಮುಂದುವರೆಸಿಕೊಂಡೇ ಹೊರಟಿದೆ. ಕೊರೊನಾ ಹೊಡೆತಕ್ಕೆ ಸಿಕ್ಕು ಹೋಟೆಲ್ ಉದ್ಯಮ ಸಾಕಷ್ಟು ತೊಂದರೆಗೆ ಸಿಲುಕಿದ್ದು, ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ನಿಯಮವನ್ನು ಸಡಿಲಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.
ಕೊರೊನಾ ಹೊಡೆತಕ್ಕೆ ಸಿಕ್ಕು ಕಳೆದ ಎರಡು ವರ್ಷಗಳಿಂದ ಯಾವುದೇ ಉದ್ಯಮಗಳು ಯಶಸ್ಸು ಕಂಡಿಲ್ಲ. ಎಲ್ಲವೂ ನಷ್ಟದಲ್ಲೇ ನಡೆಯುತ್ತಿವೆ. ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆ ಇರುವಾಗಲೂ ನೈಟ್ ಕರ್ಫ್ಯೂ ಮುಂದುವರೆಸುತ್ತಿರುವುದು ಸರಿಯಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವಾಗ ಸರ್ಕಾರಕ್ಕೆ ತೆರಿಗೆ ಕಟ್ಟುವ ಉದ್ಯಮಗಳ ಮೇಲೆ ಈ ರೀತಿ ನಿರ್ಬಂಧ ಹೇರುವುದು ಸರಿಯಲ್ಲ. ಕೂಡಲೇ ಈ ನೈಟ್ ಕರ್ಫ್ಯೂ ಹಿಂಪಡೆಯಬೇಕಾಗಿದೆ ಎಂಬುದು ಹೋಟೆಲ್ ಉದ್ಯಮಿಗಳ ಒತ್ತಾಯವಾಗಿದೆ.
ಸಾಕಷ್ಟು ಉದ್ಯಮಗಳು ಈಗಾಗಲೇ ನೆಲಕಚ್ಚಿವೆ. ನೈಟ್ ಕರ್ಫ್ಯೂ ಮುಂದುವರೆಸಿರುವುದು ಮತ್ತಷ್ಟು ಉದ್ಯಮಗಳ ನಷ್ಟಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಹೀಗಾಗಿ ಸರ್ಕಾರ ಕೂಡಲೇ ನೈಟ್ ಕರ್ಫ್ಯೂ ಹಿಂಪಡೆದು, ರಾತ್ರಿ 11 ಗಂಟೆಯವರೆಗೆ ಉದ್ಯಮ ನಡೆಸಲು ಅವಕಾಶ ಮಾಡಿಕೊಡಬೇಕಾಗಿದೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
16/09/2021 03:04 pm