ಹುಬ್ಬಳ್ಳಿ : ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಸಂಯುಕ್ತ ಆಶ್ರಯದಲ್ಲಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ನಿಮಿತ್ತ, ಅಗಸ್ಟ್ 1 ರಂದು ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಹುತಾತ್ಮರ ಕುಟುಂಬ ಹಾಗೂ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಡಾ.ರಘು ಅಕಮಂಚಿ ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ರಾಜ್ಯಾಧ್ಯಕ್ಷ ಸಂದೀಪ್ ಬುದಿಹಾಳ, ದೇಶಕ್ಕಾಗಿ ಹೋರಾಡಿದ ಅನೇಕ ಮಹನೀಯರ ಬಗ್ಗೆ ಸ್ವಾತಂತ್ರ್ಯದ ಇತಿಹಾಸವನ್ನು ಈಗಿನ ಮಕ್ಕಳಿಗೆ ತಿಳಿಸುವ ಉದ್ದೇಶದಿಂದ, ಶಾಲಾ ಕಾಲೇಜುಗಳಲ್ಲಿ ಇಂಡಿಯಾದಿಂದ ಭಾರತಕ್ಕೆ ಆಜಾದಿ ಕಾ ಅಮೃತ ಮಹೋತ್ಸವ ವಿಷಯವಾಗಿ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಅಂದು ವಿಜೇತರಿಗೆ ಸ್ವರಾಜ್ಯ-75 ಪುಸ್ತಕವನ್ನು ವಿತರಿಸಲಾಗುವುದು ಎಂದರು.
ರಾಜ್ಯದ 20 ಸಾವಿರಕ್ಕೂ ಅಧಿಕ ಕಡೆಗಳಲ್ಲಿ ಏಕಕಾಲದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಹಾಪುರುಷರ ವೇಶಭೂಷಣ ಹಾಕಿಸಿ ಮೆರವಣಿಗೆ, ಸೈಕಲ್ ಜಾತಾ ಹಾಗೂ ಹೋರಾಟದ ಪ್ರಮುಖ ಸ್ಥಳಗಳಲ್ಲಿ ಬೈಕ್ ರ್ಯಾಲಿ ನಡೆಸುವ ಉದ್ದೇಶವನ್ನು ಹೊಂದಲಾಗಿದೆ.
ಇಂಡಿಯಾದಿಂದ ಭಾರತ ವಿಷಯ ಕೇಂದ್ರಿತವಾಗಿ ವಿಶೇಷ ಉಪನ್ಯಾಸ ಮಾಡುವ ಶಿಕ್ಷಕರಿಗೆ ಈಗಾಗಲೇ ವಿಶೇಷ ಕಾರ್ಯಾಗಾರ ನಡೆಸಲಾಗಿದೆ. ಈ ಬಗ್ಗೆ ಶಾಲಾ-ಕಾಲೇಜು, ವಿಶ್ವವಿದ್ಯಾಲಯದ ಮುಖ್ಯಸ್ಥರ ಜೊತೆಗೆ ಮಾತುಕತೆ ನಡೆದಿದೆ ಎಂದು ಅಕಮಂಚಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ದೇವರಮನಿ, ರಾಜ್ಯ ಸಂಚಾಲಕ ಬಿರೇಶ ತಿರಕಪ್ಪನವರ ಸೇರಿದಂತೆ ಇನ್ನಿತರರು ಇದ್ದರು.
Kshetra Samachara
26/07/2022 07:19 pm