ಧಾರವಾಡ: ಜಿಲ್ಲಾಡಳಿತದ ನಡೆ ಹಳ್ಳಿಯ ಕಡೆ ಎಂಬ ಘೋಷವಾಕ್ಯದಡಿ ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಹೋಗಿ ವಾಸ್ತವ್ಯ ಮಾಡಿ ಅಲ್ಲಿನ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬ ಸುತ್ತೋಲೆ ಹೊರಡಿಸಿದೆ. ಅದೇ ರೀತಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಳ್ನಾವರ ತಾಲೂಕಿನ ಕೋಗಿಲಗೇರಿ ಗ್ರಾಮದಲ್ಲಿ ಇಂದು ಗ್ರಾಮ ವಾಸ್ತವ್ಯಕ್ಕೆಂದು ಹೋಗಿದ್ದಾರೆ.
ಬೆಳಿಗ್ಗೆಯೇ ಗ್ರಾಮಕ್ಕೆ ಹೋದ ಜಿಲ್ಲಾಧಿಕಾರಿಯನ್ನು ಕೋಗಿಲಗೇರಿಯ ಜನ ಅದ್ಧೂರಿಯಾಗಿ ಬರಮಾಡಿಕೊಂಡರು. ದೇಸಿ ಶೈಲಿಯ ಪೇಟ ಧರಿಸಿದ ಜಿಲ್ಲಾಧಿಕಾರಿ, ಸ್ವತಃ ಚಕ್ಕಡಿ ಹೊಡೆದುಕೊಂಡು ಬರುವ ಮೂಲಕ ಎಲ್ಲರ ಗಮನಸೆಳೆದರು. ನಂತರ ಜಿಲ್ಲಾಧಿಕಾರಿಗಳು ಕೋಗಿಲಗೇರಿಯ ಪ್ರತಿಯೊಂದು ಮನೆ ಮನೆಗೆ ಹೋಗಿ ಆಸಕ್ತಿಯಿಂದ ಅಲ್ಲಿನ ಜನರ ಸಮಸ್ಯೆಗಳನ್ನು ಕೇಳುತ್ತಿದ್ದರೆ, ಅಧಿಕಾರಿಗಳು ಮಾತ್ರ ಜಿಲ್ಲಾಧಿಕಾರಿಯನ್ನು ಹಿಂದೆ ಬಿಟ್ಟು ಕ್ಯಾರೆ ಎನ್ನದೇ ತಾವು ಮುಂದೆ ಹೋಗಿ ಕೈಕಟ್ಟಿ ನಿಂತ ದೃಶ್ಯಗಳು ಕಂಡು ಬಂದವು. ಇದನ್ನು ನೋಡಿದರೆ ಗ್ರಾಮ ವಾಸ್ತವ್ಯ ಎಂಬುದು ಕೇವಲ ಜಿಲ್ಲಾಧಿಕಾರಿಗೆ ಮಾತ್ರ ಸೀಮಿತವಾಯಿತೇ ಎಂಬ ಪ್ರಶ್ನೆ ಮೂಡುವಂತಿತ್ತು.
ಕೈಯಲ್ಲಿ ಫೈಲ್ ಹಿಡಿದುಕೊಂಡು, ಜಿಲ್ಲಾಧಿಕಾರಿಯನ್ನು ಹಿಂದೆ ಬಿಟ್ಟು ತಮಗೇನೂ ಸಂಬಂಧವಿಲ್ಲವೇನೋ ಎಂಬಂತೆ ನಿಂತಿದ್ದರು. ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಈ ಅಧಿಕಾರಿಗಳು ಕೇವಲ ಡಿಸಿ ಅವರ ಮೇಲೆ ಎಲ್ಲಾ ಜವಾಬ್ದಾರಿ ಹೊತ್ತು ಹಾಕಿ ಮುಂದೆ ಮುಂದೆ ಹೋಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು.
Kshetra Samachara
20/02/2021 06:02 pm