ಧಾರವಾಡ: ಸುಗಮ ಸಂಚಾರಕ್ಕೆ ಹಾಗೂ ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಹಲವು ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೂ ಜನೆವರಿ 15 ರಂದು ಧಾರವಾಡ ಬೈಪಾಸ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಸಂಬಂಧಿಸಿದ ಅಧಿಕಾರಿಗಳು ಇತರ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯು ಸೂಚಿಸಿರುವ ಕ್ರಮಗಳನ್ನು ಜಾರಿ ಮಾಡಿ, ತುರ್ತಾಗಿ ವರದಿ ಸಲ್ಲಿಸಬೇಕೆಂದು ರಾಜ್ಯ ರಸ್ತೆ ಸುರಕ್ಷತಾ ಸಮಿತಿಯ ಸದಸ್ಯರು ಆಗಿರುವ ರಾಜ್ಯ ಸಾರಿಗೆ ಇಲಾಖೆಯ ಆಯುಕ್ತ ಎನ್.ಶಿವಕುಮಾರ್ ಸೂಚಿಸಿದರು.
ಅವರು ಇಂದು ಸಂಜೆ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೊಲೀಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಜರುಗಿಸಿ ಮಾತನಾಡಿದರು.
ಹುಬ್ಬಳ್ಳಿ-ಧಾರವಾಡ ಮಧ್ಯದ 30 ಕಿ.ಮೀ. ಬೈಪಾಸ್ ರಸ್ತೆಯ ಅಗಲೀಕರಣಕ್ಕೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಪ್ರಸ್ತುತದಲ್ಲಿ ರಸ್ತೆ ನಿರ್ವಹಿಸುತ್ತಿರುವ ನೈಸ್ ಕಂಪೆನಿಯ ಗುತ್ತಿಗೆದಾರರು ರಸ್ತೆ ಅಗಲೀಕರಣಕ್ಕೆ ನಿರಾಪೇಕ್ಷಣಾ ಪತ್ರ (ಎನ್‍ಓಸಿ) ನೀಡಿದ್ದಾರೆ. ಅಪಘಾತಗಳು ಸಂಭವಿಸದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಈಗಾಗಲೇ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯು ಶಿಫಾರಸ್ಸು ಮಾಡಿರುವ ತಾಂತ್ರಿಕ ಹಾಗೂ ಮೂಲಸೌಕರ್ಯದ ಕ್ರಮಗಳನ್ನು ತಕ್ಷಣಕ್ಕೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಮತ್ತು ಈ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಅವರು ಹೇಳಿದರು.
ಈಗಾಗಲೇ ದಾಖಲಾಗಿರುವ ಪ್ರಕರಣಗಳಂತೆ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ 2018 ರಲ್ಲಿ 78 ಅಪಘಾತಗಳು ಸಂಭವಿಸಿದ್ದು, 30 ಜನ ಸಾವಿಗೀಡಾಗಿದ್ದಾರೆ. 2019 ರಲ್ಲಿ 53 ಅಪಘಾತಗಳಾಗಿದ್ದು, 19 ಜನ ಪ್ರಾಣ ಕಳೆದುಕೊಂಡಿದ್ದಾರೆ. 2020 ರಲ್ಲಿ 65 ಅಪಘಾತಗಳಾಗಿದ್ದು, 23 ಜನ ಸಾವಿಗೀಡಾಗಿದ್ದಾರೆ. ಮತ್ತು 2021 ರ ಜನವರಿಯಲ್ಲಿ ಒಂದೇ ಅಪಘಾತದಲ್ಲಿ 11 ಜನ ಸ್ಥಳದಲ್ಲಿ ಹಾಗೂ ಒಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಇದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ರಸ್ತೆಯಲ್ಲಿನ ಅಪಘಾತಗಳನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿದೆ. ಯಾವುದೇ ಅಪಘಾತ, ಪ್ರಾಣ ಹಾನಿಯಾಗದಂತೆ ಮುಂಜಾಗೃತಾ ಕ್ರಮಗಳನ್ನು ಜಾರಿ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಲಾಬೂರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಶೋಭಾ ಎಮ್., ಧಾರವಾಡ ಪಶ್ಚಿಮ ವಲಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ಶಂಕರಪ್ಪ, ಧಾರವಾಡ ಪೂರ್ವ ವಲಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲ್ವತ್ತವಾಡಮಠ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಬಿ. ಚೌಡಣ್ಣವರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ವಿಜಯಕುಮಾರ, ನೈಸ್ ಸಂಸ್ಥೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
Kshetra Samachara
06/02/2021 07:27 pm