ಹುಬ್ಬಳ್ಳಿ: ವೇಮನ ವಿದ್ಯಾವರ್ಧಕ ಸಂಘದಿಂದ ಪ್ರಾರ್ಥನಾ ಎಜುಕೇಶನ್ ಸೊಸೈಟಿ ಸಹಯೋಗದೊಂದಿಗೆ ಕೆ.ಎಚ್. ಪಾಟೀಲ ಸಮೂಹ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಪದವಿ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಛೇರ್ಮನ್ ಜಿ.ಬಿ.ಗೌಡಪ್ಪಗೊಳ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರಾದವರು ಅನುಕರಣೀಯ ವ್ಯಕ್ತಿತ್ವ ಒಳಗೊಂಡಿರಬೇಕು, ವಿದ್ಯಾರ್ಥಿಗಳಲ್ಲಿ ಕನಸುಗಳನ್ನು ತುಂಬಿ ಸಕಾರಗೊಳಿಸುವ ಮಾರ್ಗ ತೋರಿಸಬೇಕು, ಗುರು ಎಂದರೆ ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವವ ಎಂದರ್ಥ ಅದಕ್ಕೆ ತಕ್ಕಂತೆ ನಡೆಯಬೇಕೆಂದರು.
ನಂತರ ಮಾತನಾಡಿದ ಪದವಿಪೂರ್ವ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಛೇರ್ಮನ್ ಶ್ರೀ ಅಶೋಕ ಇಟಗಿ ವಿದ್ಯಾರ್ಥಿಗಳು ನಮ್ಮ ದೇಶದ ಮುಂದಿನ ಭವಿಷ್ಯ ಅವರಿಗೆ ಬೇಕಾದ ಶಿಕ್ಷಣವನ್ನು ನೀಡಿ ದೇಶದ ಭವಿಷ್ಯವನ್ನು ಭದ್ರಗೊಳಿಸೋಣ ಎಂದರು.
ಪದವಿ ಹಾಗೂ ಪದವಿಪೂರ್ವ ಮಹಾವಿದ್ಯಾಲಯದ ಎಲ್ಲ ಶಿಕ್ಷಕ ಮತ್ತು ಶಿಕ್ಷಕರೇತರ ಸಿಬ್ಬಂದಿಗಳನ್ನು ಗೌರವ ಸಮರ್ಪಣಾ ಪತ್ರ ನೀಡಿ ಸನ್ಮಾನಿಸಲಾಯಿತು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವ ಕಾರ್ಯದರ್ಶಿ ಆರ್.ಕೆ.ಪಾಟೀಲರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ನಾಡಿನ ಮಹಾನ್ ವ್ಯಕ್ತಿಗಳ ವ್ಯಕ್ತಿತ್ವವನ್ನು ಶಿಕ್ಷಕರಾದವರು ಪರಿಚಯಿಸಬೇಕು, ಅದರಿಂದ ಅವರ ವ್ಯಕ್ತಿತ್ವ ವಿಕಸನವಾಗುತ್ತದೆ. ಶಿಕ್ಷಣ ಶಿಕ್ಷೆ ಆಗಬಾರದು ಇಚ್ಛೆಯಿಂದ ಕಲಿಯುವಂತೆ ಮಾಡಿ ಸತತ ಅಧ್ಯಯನ ಶೀಲರಾಗಬೇಕು ಅಷ್ಟೇ ಅಲ್ಲದೆ ಶಿಕ್ಷಕ ನಿರಂತರ ವಿದ್ಯಾರ್ಥಿಯಾಗಿರಬೇಕೆಂದರು.
ಕಾಲೇಜಿನ ಪ್ರಾಚಾರ್ಯ ಎಸ್.ಬಿ.ಸಣಗೌಡರ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡುತ್ತ ಶಿಕ್ಷಕ ಎಂಬುದು ವೃತ್ತಿ ಅಷ್ಟೇ ಅಲ್ಲ ಅದೊಂದು ಧರ್ಮ ಅದನ್ನು ಅನುಸರಿಸಬೇಕಾದದ್ದು, ನಮ್ಮ ಕರ್ತವ್ಯ ಎಂದರು.
ವಿಜ್ಞಾನ ವಿಭಾಗದ ಸಹಸಂಯೋಜಕ ಡಾ. ಶಿವರಾಮ್ ಪಾಟೀಲ ಕಾರ್ಯಕ್ರಮ ನಿರೂಪಿಸಿದರು, ಸಂಘದ ಹಿತೈಷಿ ಎಚ್.ಎಚ್.ಕಿರೆಸೂರ, ಧಾರವಾಡದ ಜೆ, ಎಸ್, ಎಸ್ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕ ಡಾ. ಭೀಮರಡ್ಡಿ ಹಾಗೂ ಸಮೂಹ ಮಹಾವಿದ್ಯಾಲಯಗಳ ಎಲ್ಲ ಬೋಧಕ ಬೋಧಾಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
Kshetra Samachara
06/09/2022 08:18 pm