ಧಾರವಾಡ: ಕಳೆದ 13 ತಿಂಗಳಿನಿಂದ ಶಿಕ್ಷಕರೊಬ್ಬರಿಗೆ ವೇತನ ಕೊಡದೇ ಶಿಕ್ಷಣ ಸಂಸ್ಥೆಯೊಂದು ಅನ್ಯಾಯವೆಸಗಿರುವ ಘಟನೆ ಧಾರವಾಡದಲ್ಲಿ ನಡೆದಿದ್ದು, ಇದರಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಕೈವಾಡ ಇದೆ ಎಂದು ಶಿಕ್ಷಕ ಆರೋಪ ಮಾಡಿದ್ದಾರೆ.
ಹೌದು. ಸರ್ವೋದಯ ಶಿಕ್ಷಣ ಟ್ರಸ್ಟ್ ವ್ಯಾಪ್ತಿಗೆ ಒಳಪಡುವ ಆಲೂರು ವೆಂಕಟರಾವ್ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ತಿಪ್ಪಣ್ಣ ತಳವಾರ ಎಂಬುವವರೇ ಇದೀಗ ಅನ್ಯಾಯಕ್ಕೊಳಗಾದವರು. ಇವರು ಸರ್ವೋದಯ ಶಿಕ್ಷಣ ಟ್ರಸ್ಟ್‌ಗೆ ಸಂಬಂಧಿಸಿದ ಘಟನೆಯಲ್ಲಿ ಬಸವರಾಜ ಹೊರಟ್ಟಿ ವಿರುದ್ಧ ಹೋದರು ಎಂಬ ಕಾರಣಕ್ಕೆ ಇವರ ವೇತನವನ್ನು ತಡೆಹಿಡಿಯಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಕಾರಣಕ್ಕಾಗಿ ಶಿಕ್ಷಕ ತಿಪ್ಪಣ್ಣ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಪದವಿಪೂರ್ವ ಶಿಕ್ಷಣ ಇಲಾಖೆ ಕಚೇರಿಗೆ ಬಂದು ಡಿಡಿಪಿಯು ಅವರೊಂದಿಗೆ ತೀವ್ರ ವಾಗ್ವಾದ ನಡೆಸಿದರು. ಅಲ್ಲದೇ ಕಾರಣ ಇಲ್ಲದೇ ವೇತನ ತಡೆಹಿಡಿಯಲು ಕಾರಣ ಏನು? ಮುಂಬಡ್ತಿಯನ್ನೂ ಕೊಡದೇ ವೇತನವನ್ನೂ ಕೊಡದೇ ಅನ್ಯಾಯ ಮಾಡುತ್ತಿರುವುದು ಏಕೆ? ವೇತನ ತಡೆಹಿಡಿಯಿರಿ ಎಂಬ ಒತ್ತಾಯವೇನಾದರೂ ಇದೆಯೇ? 13 ತಿಂಗಳಿನಿಂದ ವೇತನ ಇಲ್ಲದೇ ನಾವು ಬದುಕುವುದಾದರೂ ಹೇಗೆ? ಎಂಬೆಲ್ಲ ಪ್ರಶ್ನೆಗಳನ್ನು ಹಾಕಿದರು. ಒಂದು ಕ್ಷಣದಲ್ಲಿ ಶಿಕ್ಷಕ ತಿಪ್ಪಣ್ಣ ಹಾಗೂ ಡಿಡಿಪಿಯು ಕೃಷ್ಣಾ ನಾಯ್ಕ್ ಅವರ ಮಧ್ಯೆ ತೀವ್ರ ಮಾತಿನ ಚಕಮಕಿಯೇ ನಡೆಯಿತು.
ಸ್ವತಃ ಜಿಲ್ಲಾಧಿಕಾರಿಗಳೇ ತಿಪ್ಪಣ್ಣ ಅವರಿಗೆ ವೇತನ ಮಂಜೂರು ಮಾಡುವಂತೆ ಆದೇಶ ಮಾಡಿದ್ದಾರೆ. ಬಸವರಾಜ ಹೊರಟ್ಟಿ ಅವರು ತಮಗೆ ಪರಿಚಯವಿರುವ ಹಾಗೂ ತಿಪ್ಪಣ್ಣ ಅವರಿಗಿಂತಲೂ ವೃತ್ತಿಯಲ್ಲಿ ಕಿರಿಯರಾದವರನ್ನು ಕಾಲೇಜಿನ ಪ್ರಾಚಾರ್ಯರಾಗಿ ನೇಮಕಗೊಳಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಈ ಎಲ್ಲಾ ವಿಚಾರವಾಗಿ ನಾನು ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಅಲ್ಲಿಂದ ಏನೂ ಸ್ಪಷ್ಟ ಉತ್ತರ ಬಂದಿಲ್ಲ. ಇದರಲ್ಲಿ ದ್ವಂದ್ವ ಇದೆ ಎಂದು ಡಿಡಿಪಿಯು ಕೃಷ್ಣಾ ನಾಯಕ ಹಾರಿಕೆ ಉತ್ತರ ನೀಡಿದರು.
ಸರ್ವೋದಯ ಶಿಕ್ಷಣ ಟ್ರಸ್ಟ್‌ನ ವ್ಯಾಪ್ತಿಗೆ ಒಳಪಡುವ ಈ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ತಿಪ್ಪಣ್ಣ ಅವರು ಮುಂದಿನ ತಿಂಗಳು ನಿವೃತ್ತಿ ಹೊಂದಲಿದ್ದಾರೆ. ಆದರೆ, ಕಳೆದ ಒಂದು ವರ್ಷದಿಂದ ಇವರ ವೇತನವನ್ನೇ ತಡೆಹಿಡಿದಿದ್ದರಿಂದ ವಾಲ್ಮೀಕಿ ಸಮಾಜದವರೇ ಇವರ ಜೀವನೋಪಾಯಕ್ಕೆ ಅಲ್ಪಸ್ವಲ್ಪ ಸಹಾಯ ಮಾಡಿದ್ದಾರೆ. ಸದ್ಯ ಅನ್ಯಾಯಕ್ಕೊಳಗಾಗಿರುವ ತಿಪ್ಪಣ್ಣ ಅವರ ಬೆನ್ನ ಹಿಂದೆ ವಾಲ್ಮೀಕಿ ಸಮಾಜದವರು ನಿಂತಿದ್ದು, ಈ ಪ್ರಕರಣ ಎಲ್ಲಿಗೆ ಹೋಗಿ ತಲುಪುತ್ತದೆಯೋ ಕಾದು ನೋಡಬೇಕಿದೆ.
Kshetra Samachara
18/04/2022 10:24 pm