ಹುಬ್ಬಳ್ಳಿ: ಕೊರೊನಾ ನಂತರ ಪೂರ್ಣ ಪ್ರಮಾಣದಲ್ಲಿ ಸರಕಾರಿ ಶಾಲೆಗಳು ಆರಂಭವಾಗಿವೆ. ಅಲ್ಲದೇ, ಸರಕಾರಿ ಶಾಲೆಗೆ ಹೆಸರು ನೋಂದಾಯಿಸುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎನ್ನುವ ಖುಷಿಯಲ್ಲಿರುವಾಗಲೇ ಶಾಲೆಯಿಂದ ಮಕ್ಕಳು ಹೊರಗಡೆ ಉಳಿದಿದ್ದಾರೆ.
ರಾಜ್ಯದಲ್ಲಿ 50 ಸಾವಿರ ಮಕ್ಕಳು ಹೊರಗುಳಿದಿದ್ದರೆ ಧಾರವಾಡ ಜಿಲ್ಲೆಯಲ್ಲಿಯೇ 1463 ಮಕ್ಕಳು ಹೊರಗುಳಿದಿದ್ದಾರೆ. ಶಿಕ್ಷಣ ಇಲಾಖೆಯ ಸಮೀಕ್ಷೆಯಿಂದಲೇ ಈ ಅಂಶ ಬೆಳಕಿಗೆ ಬಂದಿದೆ.
2020-21ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆ ಜಂಟಿಯಾಗಿ ಮನೆ ಮನೆ ಸಮೀಕ್ಷೆ ನಡೆಸಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದು ಕೆಲಸದಲ್ಲಿ ತೊಡಗಿದ್ದಾರೆ.
ಕೋವಿಡ್ ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕೆಲ ಕುಟುಂಬಗಳಿಗೆ ಮಕ್ಕಳ ದುಡಿಮೆಯೇ ಜೀವನಾಧಾರವಾಗಿದೆ. ಕೆಲ ಮಕ್ಕಳು ಶಾಲೆಯನ್ನೇ ಮರೆತುಬಿಟ್ಟಿದ್ದಾರೆ. ಮಕ್ಕಳು ಹಾಗೂ ಪಾಲಕರ ನಿರಾಸಕ್ತಿಯೂ ಶಾಲೆಯಿಂದ ಹೊರಗುಳಿಯಲು ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. 6ರಿಂದ 10ನೇ ತರಗತಿಯವರೆಗೆ ಸದ್ಯ ಶಾಲೆ ಆರಂಭವಾಗಿದ್ದರೂ ಶೇ. 50ರಷ್ಟು ಮಾತ್ರ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಸರಕಾರಿ ಹಾಗೂ ಖಾಸಗಿ ಶಾಲೆಗಳ ಮಕ್ಕಳೂ ಸರಿಯಾಗಿ ಶಾಲೆಗೆ ತೆರಳುತ್ತಿಲ್ಲ. ಇವರೆಲ್ಲರೂ ಶಾಲೆಯಿಂದ ಹೊರಗುಳಿದವರೆಂಬುದು ಕೆಲವರ ಲೆಕ್ಕಾಚಾರ.
ಅಕ್ಟೋಬರ್ 21ರಿಂದ ಪ್ರಾಥಮಿಕ ಶಾಲೆಗಳು ಆರಂಭವಾಗಿವೆ. ಆದರೆ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಜರಾಗದಿರುವುದು ಆತಂಕಕ್ಕೆ ಕಾರಣವಾಗಿದೆ. ಮಕ್ಕಳು ಶಾಲೆಯಿಂದ ಹೊರಗೆ ಉಳಿಯದಂತೆ ಸರ್ಕಾರದ ಹಲವು ಯೋಜನೆಗಳನ್ನು ರೂಪಿಸಿದೆ. ರೇಡಿಯೋ, ದೂರದರ್ಶನದ ಸಂವೇದ ಕಾರ್ಯಕ್ರಮ, ಯೂಟ್ಯೂಬ್ ಚಾನೆಲ್, ದೀಕ್ಷಾ ಪೋರ್ಟಲ್-ಜ್ಞಾನದೀಪ ಹಾಗೂ ಆನ್ಲೈನ್ ತರಗತಿಗಳನ್ನು ನಡೆಸಿ ಪಾಠ ಮಾಡಲಾಗಿದೆ. ರೇಡಿಯೋ, ದೂರದರ್ಶನ, ಮೊಬೈಲ್ ಇಲ್ಲದ ಬಡವರ ಮಕ್ಕಳೇ ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಕೋವಿಡ್ ನಿಂದ ಅದೆಷ್ಟೋ ಕುಟುಂಬಗಳಿಗೆ ಮಕ್ಕಳೇ ಆಧಾರವಾಗಿದ್ದಾರೆ. ಸಮೀಕ್ಷೆಯಿಂದ ಇಂಥ ಮತ್ತಷ್ಟು ಅಂಕಿ-ಅಂಶಗಳು ಹೊರಗೆ ಬರಬೇಕು ಎಂದು ಶಿಕ್ಷಣ ತಜ್ಞರು ಒತ್ತಾಯಿಸಿದ್ದಾರೆ.
ಗ್ರಾಮೀಣ ವಲಯದ ಧಾರವಾಡ ಗ್ರಾಮೀಣ 107, ಹುಬ್ಬಳ್ಳಿ ಗ್ರಾಮೀಣ 136, ಕಲಘಟಗಿ 39, ಕುಂದಗೋಳ 51, ನವಲಗುಂದ ಹಾಗೂ ಶಹರ ವಲಯದ ಹುಬ್ಬಳ್ಳಿ ನಗರ 199, ಧಾರವಾಡ ನಗರ 92, ಕಲಘಟಗಿ ನಗರ ಮತ್ತು ಕುಂದಗೋಳ ನಗರ 2, ನವಲಗುಂದ ನಗರ 51, ಅಣ್ಣಿಗೇರಿ ನಗರ 134 ಹಾಗೂ ಅಳ್ನಾವರ ನಗರ 4 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.
Kshetra Samachara
16/11/2021 01:26 pm