ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಒಂದಿಲ್ಲೊಂದು ರೀತಿಯಲ್ಲಿ ಸಾಧನೆಯನ್ನು ಮುಡಿಗೇರಿಸಿಕೊಳ್ಳುತ್ತಿದೆ.ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸ್ವಯಂಚಾಲಿತ ರೋಬೋಟ್ ಕಂಡು ಹಿಡಿದು ಎಲ್ಲರ ಹುಬ್ಬೇರುವಂತೆ ಮಾಡಿದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಈಗ ಮತ್ತೊಂದು ಗೌರವವನ್ನು ಮುಡಿಗೇರಿಸಿಕೊಂಡಿದೆ.
ಹೌದು..ಕೆ.ಎಲ್.ಇ ಟೆಕ್ನಾಲಜಿಕಲ್ ಯೂನಿವರ್ಸಿಟಿಗೆ 2021 ನೇ ಸಾಲಿನ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಅಡಿಯಲ್ಲಿ ಪ್ರತಿಷ್ಠಿತ ಅಸ್ಸೋಚಾಮ್ ಯೂನಿವರ್ಸಿಟಿ ಆಫ್ ದಿ ಇಯರ್ ಪ್ರಶಸ್ತಿಯನ್ನು ನೀಡಲಾಗಿದೆ.
ವಿಶ್ವವಿದ್ಯಾಲಯದ ಪರವಾಗಿ ಡೀನ್ (ಅಕಾಡೆಮಿಕ್ಸ್) ಡಾ.ಪ್ರಕಾಶ್ ತಿವಾರಿ ಪ್ರಶಸ್ತಿಯನ್ನು ಪಡೆದರು. ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ರಾಜ್ಯಸಭೆಯ ಸಂಸತ್ ಸದಸ್ಯ ಡಾ.ವಿನಯ್ ಸಹಸ್ರಬುದೇ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಅಸ್ಸೋಚಮ್ ಅಧ್ಯಕ್ಷ ಡಾ.ಪ್ರಶಾಂತ್ ಭಲ್ಲಾ, ಅಸ್ಸೋಚಮ್ ನ ಸಹ-ಅಧ್ಯಕ್ಷ ಕುನ್ವರ್ ಶೇಖರ್ ವಿಜೇಂದ್ರ ಮತ್ತು ರಾಷ್ಟ್ರೀಯ ಪುಸ್ತಕ ಟ್ರಸ್ಟ್ ನಿರ್ದೇಶಕ ಯುವರಾಜ್ ಮಲಿಕ್ ಉಪಸ್ಥಿತರಿದ್ದರು.
ಬೋಧನೆ-ಕಲಿಕೆಯ ಪ್ರಕ್ರಿಯೆ, ಶೈಕ್ಷಣಿಕ ಸಂಶೋಧನೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಆವಿಷ್ಕಾರಗಳು, ತಂತ್ರಜ್ಞಾನ ಆಧಾರಿತ ಉದ್ಯಮಗಳಿಗೆ ಇನ್ಕ್ಯುಬೇಟರ್ ಪರಿಸರ ವ್ಯವಸ್ಥೆಯನ್ನು ಒದಗಿಸುವುದು ಮತ್ತು ಪ್ರಾದೇಶಿಕ ಸಮಾಜಕ್ಕೆ ಒಟ್ಟಾರೆ ಕೊಡುಗೆ ನೀಡುವ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯವು ನೀಡಿದ ಮಹತ್ವದ ಕೊಡುಗೆಗಳ ಬೆಳಕಿನಲ್ಲಿ ಈ ಪ್ರಶಸ್ತಿ ಬರುತ್ತದೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಫಲಿತಾಂಶ ಆಧಾರಿತ ಶಿಕ್ಷಣ ಮತ್ತು ಪರಿಣಾಮಕಾರಿ ಪರೀಕ್ಷಾ ಸುಧಾರಣೆಗಳ ಅನುಷ್ಠಾನದಲ್ಲಿ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯವು ಮುಂಚೂಣಿಯಲ್ಲಿದೆ.
Kshetra Samachara
27/02/2021 03:46 pm