ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಗೊಂದಲದಲ್ಲಿ ವಿದ್ಯಾರ್ಥಿಗಳು.. ಸಮಸ್ಯೆ ಬಗೆಹರಿಯೋದು ಯಾವಾಗ?

ಧಾರವಾಡ: ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಮುಂದಾಗಿದ್ದು, ಅವರಿಗೆ ಅನಾನುಕೂಲ ಆಗದಿರಲಿ ಎನ್ನುವ ಕಾರಣಕ್ಕೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಆ ಯೋಜನೆಗಳು‌ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪದೇ ವಿದ್ಯಾರ್ಥಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿ ಕೊಂಚ ದೂರು ಸರಿದಿದ್ದು, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳತ್ತ ಮುಖ ಮಾಡಿದ್ದಾರೆ. ಆದರೆ, ಅಧಿಕಾರಿಗಳ ಯಡವಟ್ಟಿನಿಂದಾಗಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ವಿದ್ಯಾರ್ಥಿಗಳ ಖಾತೆಗೆ ಜಮಾ ಆಗಿರೋ ಕಡಿಮೆ ಹಣ.. ಕಡಿಮೆ ಹಣ ಬಂದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ವಿದ್ಯಾರ್ಥಿಗಳು.. ಹಣ ಸಂದಾಯ ಆಗಿರುವ ಬಗ್ಗೆ ಮಾಹಿತಿಯೇ ಇಲ್ಲ ಎನ್ನುತ್ತಿರುವ ಪ್ರಾಂಶುಪಾಲರು.. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲಿ ಎಂಬ ಕಾರಣಕ್ಕಾಗಿ ಸರ್ಕಾರ ವಿದ್ಯಾರ್ಥಿ ವೇತನ ನೀಡುತ್ತಿದೆ. ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ಗಾಗಿ ಎಲ್ಲ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದಾರೆ. ಎರಡೆರಡು ಬಾರಿ ದಾಖಲಾತಿಗಳನ್ನು ಪರಿಶೀಲನೆ ನಡೆಸಿ, ಸಮಾಜ ಕಲ್ಯಾಣ ಇಲಾಖೆಗೆ ಆನ್ಲೈನ್ ಮೂಲಕ ಅಪ್ಲೋಡ್ ಮಾಡಿದ್ದಾರೆ. ಇದೀಗ ಎಸ್‌ಎಸ್‌ಪಿ(ಸ್ಟೂಡೆಂಟ್ ಸ್ಕಾಲರ್‌ಶಿಪ್ ಪೋರ್ಟಲ್) ಮೂಲಕ ವಿದ್ಯಾರ್ಥಿಗಳಿಗೆ ಸರ್ಕಾರದ ವಿದ್ಯಾರ್ಥಿ ವೇತನ ಜಮಾ ಆಗುತ್ತಿದ್ದು, ವಿದ್ಯಾರ್ಥಿಗಳ ಖಾತೆಗೆ ಜಮಾ ಆಗಿರುವ ಹಣ ಕಂಡು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

2019-20, 2020-21 ನೇ ಸಾಲಿನ ವಿದ್ಯಾರ್ಥಿ ವೇತನವನ್ನು ಎಸ್‌ಎಸ್‌ಪಿ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಂದಾಯ ಮಾಡಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೆ 15 ಸಾವಿರ ರೂಪಾಯಿ ಜಮಾ ಆಗಬೇಕಾಗಿದ್ದ ಹಣ ಕೇವಲ 80 ರೂಪಾಯಿ, 260 ರೂಪಾಯಿಯಂತೆ ಜಮಾ ಆಗಿದೆ. 1000ಕ್ಕೂ ಹೆಚ್ಚು ‌ವಿದ್ಯಾರ್ಥಿಗಳ ಖಾತೆಗೆ ಈ ರೀತಿಯ ಹಣ ಸಂದಾಯ ಆಗಿದ್ರೆ, ಉಳಿದ ವಿದ್ಯಾರ್ಥಿಗಳಿಗೆ ಹಣವೇ ಸಂದಾಯ ಆಗಿಲ್ಲ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಎಸ್.ಬಿ. ಪಾಟೀಲ್ ಅವರನ್ನು ಕೇಳಿದರೆ, ನಾವು ಎಲ್ಲ ವಿದ್ಯಾರ್ಥಿಗಳಿಗೆ ತಿಳುವಳಿಕೆ ಹೇಳಿ, ಹತ್ತು ಜನರ ತಂಡದೊಂದಿಗೆ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸುವ ಕೆಲಸ ಮಾಡಿದ್ದೇವೆ. ಆದರೆ, ವಿದ್ಯಾರ್ಥಿಗಳ ಖಾತೆಗೆ ಕಡಿಮೆ ಹಣ ಜಮಾ ಆಗಿರುವ ಬಗ್ಗೆ ಈಗಷ್ಟೇ ಮಾಹಿತಿ ಬಂದಿದೆ. ಇದರ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇವೆ ಎನ್ನುತ್ತಾರೆ.

ಇನ್ನು ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೂ ಇದೇ ಸಮಸ್ಯೆ ಎದುರಾಗಿದೆ. ವಿಶ್ವವಿದ್ಯಾಲಯ ಹೊರತುಪಡಿಸಿ ಬೇರೆ ಬೇರೆ ಕಾಲೇಜು ವಿದ್ಯಾರ್ಥಿಗಳಿಗೆ 15 ಸಾವಿರಕ್ಕೂ ಹೆಚ್ಚು ಹಣ ಜಮಾ ಆಗಿದ್ದು, ಕೆಲವು ವಿದ್ಯಾರ್ಥಿಗಳಿಗೆ ಹಣವೇ ಸಿಕ್ಕಿಲ್ಲ. ಇದರ ನಡುವೆ ವಿದ್ಯಾರ್ಥಿ ವೇತನ ನೀಡುವ ಪೋರ್ಟಲ್ ಕೂಡ ತನ್ನ ಕಾರ್ಯ ಸ್ಥಗಿತಗೊಳಿಸಿದ್ದು, ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಆಗಿರುವ ಯಡವಟ್ಟನ್ನು ಸರಿಪಡಿಸಿ, ವಿದ್ಯಾರ್ಥಿಗಳ ಸಮಸ್ಯೆ ನಿವಾರಣೆಗೆ ಕವಿವಿ ಮುಂದಾಗುತ್ತದೆಯಾ? ಎಂಬುದನ್ನು ಕಾದು ನೋಡಬೇಕಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ

Edited By : Shivu K
Kshetra Samachara

Kshetra Samachara

20/09/2021 09:34 pm

Cinque Terre

104.59 K

Cinque Terre

4

ಸಂಬಂಧಿತ ಸುದ್ದಿ