ಧಾರವಾಡ: ಇತ್ತೀಚಿನ ದಿನಗಳಲ್ಲಿ ಹಿಂದೂ-ಮುಸ್ಲಿಂ ಎಂಬ ಬೇಧ ಭಾವ ಹುಟ್ಟಿಕೊಳ್ಳುತ್ತಿದೆ. ದೇವನೊಬ್ಬ ನಾಮ ಹಲವು ಎಂಬ ಸಂದೇಶ ಜನಮಾನಸದಿಂದ ದೂರವಾಗುತ್ತಿರುವ ಸಂದರ್ಭದಲ್ಲೇ ರಹೀಮನನ್ನು ಪೂಜಿಸುವ ಧರ್ಮದವರು ರಾಮನನ್ನೂ ಪೂಜಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದು ವಿದ್ಯಾಕಾಶಿ ಧಾರವಾಡ.
ದೇಶದಾದ್ಯಂತ ಸಂಭ್ರಮದಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ. ಈ ಸಂಭ್ರಮದಲ್ಲಿ ಮುಸ್ಲಿಂ ಬಾಂಧವರೂ ಭಾಗಿಯಾಗಿ ಸ್ವತಃ ಅವರೇ ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ಈ ದೃಶ್ಯ ಕಂಡು ಬಂದದ್ದು ಧಾರವಾಡದ ಅತ್ತಿಕೊಳ್ಳದಲ್ಲಿ. ಪೃಥ್ವಿ ಯುವಕ ಮಂಡಳದವರು ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿಗೆ ಮುಸ್ಲಿಂರು ಇಂದು ಪೂಜೆ ಸಲ್ಲಿಸಿದ್ದಾರೆ. ಇಂದು ಶುಕ್ರವಾರವಾಗಿದ್ದರಿಂದ ನಮಾಜ್ ಮುಗಿಸಿಕೊಂಡು ಬಂದ ಮುಸ್ಲಿಂ ಬಾಂಧವರು ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿ, ಕಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ. ಸುಮಾರು 50 ಜನ ಮುಸ್ಲಿಂ ಬಾಂಧವರು ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನಸೆಳೆದರು.
Kshetra Samachara
02/09/2022 06:41 pm