ಕೊರೊನಾದಿಂದಾಗಿ ಎರಡು ವರ್ಷ ಕಳೆಗುಂದಿದ್ದ ಶ್ರೀ ಗಣೇಶೋತ್ಸವ ಈ ವರ್ಷ ಮೆರುಗು ಪಡೆಯಲಿದೆ. ರಾಜ್ಯದ ಜನತೆಯ ಕುತೂಹಲಕ್ಕೆ ಕಾರಣವಾಗಿರುವ ಹುಬ್ಬಳ್ಳಿ ಗಣೇಶೋತ್ಸವಕ್ಕೆ ಪೊಲೀಸ್ ಇಲಾಖೆ ಕೂಡ ಅವಳಿನಗರದಲ್ಲಿ ಸಾಕಷ್ಟು ಬಂದೋಬಸ್ತ್ ಗೆ ಮುಂದಾಗಿದ್ದು, ಮೂರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ವಾಣಿಜ್ಯ ನಗರಿಯಲ್ಲಿ ಠಿಕಾಣಿ ಹೂಡಲಿದ್ದಾರೆ.
ಹೌದು... ಈಗಾಗಲೇ ಸಾಕಷ್ಟು ಚರ್ಚೆಗೆ ಬಂದಿರುವ ಈದ್ಗಾ ಮೈದಾನದ ವಿಷಯವನ್ನು ಹತ್ತಿಕ್ಕಲು ಹಾಗೂ ವ್ಯವಸ್ಥಿತ ರೀತಿಯಲ್ಲಿ ಆಚರಣೆ ಮಾಡಲು ಪೊಲೀಸ್ ಕಮಿಷನರೇಟ್ ನಿರ್ಧಾರ ಮಾಡಿದೆ. ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಗಣೇಶೋತ್ಸವ ಆಚರಣೆಗೆ ಹಲವು ನಿರ್ಬಂಧ ಹೇರಿದ್ದು, ಈ ನಿಟ್ಟಿನಲ್ಲಿ ಹು-ಧಾ ಪೊಲೀಸ್ ಕಮಿಷನರೇಟ್ ಸೂಕ್ತ ನಿರ್ಧಾರಕ್ಕೆ ಮುಂದಾಗಿದೆ. ಇನ್ನು, ಗಣೇಶೋತ್ಸವಕ್ಕೆ 700ಕ್ಕೂ ಹೆಚ್ಚು ಮಹಾಮಂಡಳಗಳು ಸಿದ್ಧವಾಗಿವೆ. ಇದರ ಜೊತೆಯಲ್ಲಿ ಮನೆ ಮನೆಯಲ್ಲಿಯೂ ಗಣೇಶನನ್ನು ಸಂಭ್ರಮದಿಂದ ಸ್ವಾಗತಿಸಲು ಸಾರ್ವಜನಿಕರು ಮುಂದಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅವಳಿನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟಾರೆ 700ಕ್ಕೂ ಹೆಚ್ಚು ಗಣೇಶೋತ್ಸವ ಮಹಾಮಂಡಳಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಿವೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 11ರ ವರೆಗೆ ಗಣೇಶೋತ್ಸವ ಆಚರಣೆಯಾಗಲಿದೆ. ಆ. 31ರ ಮೆರವಣಿಗೆ ದಿನ ಹಾಗೂ 3,5,7,9 ಮತ್ತು 11ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಸೇರಿ ನಗರದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಅವಳಿನಗರದ ವ್ಯಾಪ್ತಿಯಲ್ಲಿ ಒಟ್ಟಾರೆ 2 ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದಾರೆ. ಇದರ ಜೊತೆಗೆ ಈ ವರ್ಷ 1 ಸಾವಿರಕ್ಕೂ ಹೆಚ್ಚು ಹೊರಗಿನಿಂದ ಪೊಲೀಸ್ ಸಿಬ್ಬಂದಿ ಕರೆಸಲಾಗುತ್ತಿದೆ. 1 ಆರ್ ಎಎಫ್ ಪಡೆ , 410 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, 400 ಹೋಮ್ ಗಾರ್ಡ್ ಕರೆಸಲಾಗುತ್ತಿದೆ. ಅವಳಿನಗರದಲ್ಲಿ 2 ಕೆಎಸ್ ಆರ್ ಪಿ ಪಡೆ ಇದ್ದು, ಒಟ್ಟಾರೆ 9 ಕೆ ಎಸ್ ಆರ್ ಪಿ ಪಡೆ, 6 ಸಿಎಆರ್ ಪಡೆ ಕಾರ್ಯ ನಿರ್ವಹಿಸಲಿವೆ. ಸದ್ಯ 3 ಡಿಸಿಪಿ, 4 ಎಸಿಪಿ ಹಾಗೂ 25 ಇನ್ಸ್ ಪೆಕ್ಟರ್ ಸೇರಿ ಹೊರಗಿನಿಂದ ಅಧಿಕಾರಿಗಳು, ಡಿಸಿಪಿ, ಎಸಿಪಿ, ಪಿಎಸ್ಐಗಳು ಈ ತಂಡ ಸೇರಲಿದ್ದಾರೆ.
ಅವಳಿನಗರದಲ್ಲಿ ಗಣೇಶೋತ್ಸವ ವಿಸರ್ಜನೆಗೆ ಸಂಬಂಧಪಟ್ಟಂತೆ ಇಂದಿರಾ ಗ್ಲಾಸ್ ಹೌಸ್ ಹತ್ತಿರದ ಭಾವಿ, ಹೊಸೂರು ಭಾವಿ, ಉಣಕಲ್ ಕೆರೆ, ಸಂತೋಷನಗರ ಕೆರೆ, ಸೋನಿಗಾಂಧಿನಗರ, ರೇಣುಕಾ ದೇವಿ ಮಂದಿರ, ಜಂಗ್ಲಿಪೇಟೆ, ಈಶ್ವರನಗರ, ಆನಂದನಗರ, ರಾಯನಾಳ, ಉದಯನಗರ ಭಾವಿ ಹಾಗೂ ಧಾರವಾಡದ ಮುಚ್ಚಳಂಬಿ ಭಾವಿ ಸುತ್ತಮುತ್ತ ವಿಸರ್ಜನೆ ದಿನಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಹಾಕಲಾಗುತ್ತಿದೆ. ವಿಶೇಷವಾಗಿ ಭಾವಿ ಸುತ್ತಮುತ್ತ ಲೈಟ್ ವ್ಯವಸ್ಥೆ, ಸಿಸಿ ಟಿವಿ, ಅಗ್ನಿಶಾಮಕ ದಳ, ಈಜು ಸಿಬ್ಬಂದಿ ನೇಮಿಸಲಾಗುತ್ತಿದೆ. ವಿಶೇಷವಾಗಿ ಸಾರ್ವಜನಿಕ ಗಣೇಶ ಮೂರ್ತಿಗಳು ಇಂದಿರಾ ಗ್ಲಾಸ್ ಹೌಸ್ ಬಳಿ ಬರುವುದರಿಂದ ಅಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/08/2022 06:06 pm