ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದತ್ತು ನೀಡುವ ಪ್ರಕ್ರಿಯೆಲ್ಲಿ ಧಾರವಾಡ ಜಿಲ್ಲೆಗೆ ಎರಡನೇ ಸ್ಥಾನ

ಹುಬ್ಬಳ್ಳಿ: ಕೇಂದ್ರ ದತ್ತು ಸ್ವೀಕಾರ ಸಂಪನ್ಮೂಲ ಪ್ರಾಧಿಕಾರದ (ಕಾರಾ) ಮಾರ್ಗಸೂಚಿಗಳ ಅನ್ವಯ ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸುವಲ್ಲಿ ಧಾರವಾಡ ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ.ಹೆಚ್. ಲಲಿತಾ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹುಬ್ಬಳ್ಳಿಯ ಅಮೂಲ್ಯ (ಜಿ) ಶಿಶುಗೃಹ, ಇವರ ಸಹಯೋಗದಲ್ಲಿ, ಘಂಟಿಕೇರಿಯ ಬಾಲಕಿಯರ ಸರ್ಕಾರಿ ಬಾಲಮಂದಿರದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನವೆಂಬರ್ 2020ನ್ನು ಅಂತರಾಷ್ಟ್ರೀಯ ದತ್ತು ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಮಕ್ಕಳ ರಕ್ಷಣಾ ನಿರ್ದೇಶನಾಲಯವು ಅನಾಥ, ಪರಿತ್ಯಕ್ತ, ಒಪ್ಪಿಸಲ್ಪಟ್ಟ ಮಕ್ಕಳನ್ನು ರಕ್ಷಣೆ ನೀಡಿ ಪ್ರೋತ್ಸಾಹಿಸುತ್ತಿದೆ. ಮಕ್ಕಳ ರಕ್ಷಣಾ ಘಟಕ ಅಡಿಯಲ್ಲಿ ಅಮೂಲ್ಯ(ಜಿ) ಶಿಶುಗೃಹ 2005ನೇ ಇಸವಿಯಿಂದ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯವರೆಗೆ ಒಟ್ಟು 113 ಮಕ್ಕಳನ್ನು ಸ್ವದೇಶಿ ಮತ್ತು ವಿದೇಶಿ ಪ್ರಕ್ರಿಯೆಯಲ್ಲಿ ದತ್ತು ನೀಡಲಾಗಿದೆ. ಮಕ್ಕಳನ್ನು ಕಾನೂನ ಮೂಲಕ ಅರ್ಜಿ ಸಲ್ಲಿಸಿ ದತ್ತು ಪಡೆಯಬೇಕು. ಬಹಳಷ್ಟು ಜನರು ದತ್ತು ಸ್ವೀಕರಿಸುವುದಕ್ಕೆ ಮುಂದೆ ಬರುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ರಾಧಾ ಕಲಾಲ, ದತ್ತು ಕಾರ್ಯಕ್ರಮವು ಒಂದು ಉತ್ತಮ ಕಾರ್ಯಕ್ರಮವಾಗಿದೆ. ಮಕ್ಕಳಿಗೆ ಜನ್ಮ ನೀಡಿದರೆ ಅವು ಕೇವಲ ನಮ್ಮ ಮಕ್ಕಳಾಗುತ್ತವೆ. ಅದೇ ಮಕ್ಕಳನ್ನು ನಿಯಮಾನುಸಾರ ದತ್ತು ಪಡೆದಲ್ಲಿ ಆ ಮಕ್ಕಳು ದೇವರ ಮಕ್ಕಳಿದ್ದಂತೆ ಎಂದರು.

ಈ ವೇಳೆ ದತ್ತು ಪೋಷಕರ ಸಮಾಲೋಚನಾ ಸಭೆಯನ್ನು ಏರ್ಪಡಿಸಲಾಗಿತ್ತು. ಡಾ. ಶಕ್ತಿಪ್ರಸಾದ ಸಿ.ಹಿರೇಮಠ ದಂಪತಿ ಮಾತನಾಡಿ ಮಕ್ಕಳಿಲ್ಲದ ದಂಪತಿಗಳ ನೋವು ಅನುಭವಿಸಿದವರಿಗೇ ಗೊತ್ತು. ಅಂತಹ ದಂಪತಿಗಳಿಗೆ ಸರ್ಕಾರದ ದತ್ತು ಮಾರ್ಗಸೂಚಿಯನ್ವಯ ಮಕ್ಕಳನ್ನು ದತ್ತು ನೀಡಿ, ಅವರ ಜೀವನದಲ್ಲಿ ಸಂತೋಷ ತುಂಬುತ್ತಿರುವುದು ಒಂದು ಉತ್ತಮ ಕಾರ್ಯ. ದತ್ತು ದಂಪತಿಗಳು ಮಗುವನ್ನು ದತ್ತು ಪಡೆದ ನಂತರ ಅವರ ಜೀವನ ಶೈಲಿಯನ್ನು ಧನಾತ್ಮಕವಾಗಿ ಬದಲಾಯಿಸಿಕೊಂಡು, ಮಗುವಿಗೆ ಪೂರಕ ವಾತಾವರಣವನ್ನು ಒದಗಿಸುವುದು ಅವರ ಕರ್ತವ್ಯವಾಗಿರುತ್ತದೆ ಎಂದರು.

ಮಂಜುನಾಥ ಕಡೇಮನಿ ದಂಪತಿಗಳು ಮಾತನಾಡಿ, ದತ್ತು ದಂಪತಿಗಳು ಅರ್ಜಿ ಸಲ್ಲಿಸಿದ ನಂತರ ಸೂಕ್ತ ದಾಖಲೆಗಳನ್ನು ಸಿದ್ಧಪಡಿಸಿಕೊಂಡು, ಸಕಾರಾತ್ಮಕವಾಗಿ ಹಾಗೂ ತಾಳ್ಮೆಯಿಂದ ಇದ್ದಲ್ಲಿ, ಒಳ್ಳೆಯ ಮಗು ದಂಪತಿಗಳಿಗೆ ಸಿಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ದೀಪಾ ದಂಡವತಿ, ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುವಂತೆ, ಯಾವ ಮಕ್ಕಳನ್ನು ಯಾವ ದಂಪತಿಗಳ ಮಡಿಲಿಗೆ ಸೇರಿಸಬೇಕೋ ಎಂದು ದೇವರು ನಿರ್ಧರಿಸಿರುತ್ತಾರೆ. ಅದರಂತೆ ದತ್ತು ಮಕ್ಕಳನ್ನು ದೇವರು ಕೊಟ್ಟಿರುವ ಪ್ರಸಾದ ಎಂದು ತಿಳಿದು ಮಕ್ಕಳ ಭವಿಷ್ಯವನ್ನು ರೂಪಿಸುವಂತೆ ಹಾಗೂ ದತ್ತು ಮಕ್ಕಳಿಗೆ, ಅವರು ದತ್ತು ಬಂದಿರುವ ವಿಷಯವನ್ನು ಮಕ್ಕಳ ಮನಸ್ಸಿಗೆ ನೋವಾಗದಂತೆ ತಿಳಿಸಿದಾಗ ಮಕ್ಕಳು ಸಕಾರಾತ್ಮಕ ಚಿಂತನೆ ಮತ್ತು ಅವರ ಭವಿಷ್ಯ ರೂಪಿಸಿಕೊಳ್ಳುವಲ್ಲಿ ತಮ್ಮ ಹೆಜ್ಜೆಯನ್ನಿಡುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧೀಕ್ಷಕರುಗಳಾದ ಅತೀಕಾ ಎಂ. ಸಿದ್ಧಿ, ಕೆ.ಜಿ ನಾಗರತ್ನ ಭಾಗ್ಯಶ್ರೀ ಅಂಗಡಿ, ಆಶಾ ನರೇಂದ್ರ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಧಾರವಾಡ ಸಿಬ್ಬಂದಿಗಳು, ಬಾಲಮಂದಿರ ಹಾಗೂ ಶಿಶುಗೃಹದ ಸಿಬ್ಬಂದಿಗಳು ಹಾಜರಿದ್ದರು. ಪ್ರಕಾಶ ಕೊಡ್ಲಿವಾಡ ಸ್ವಾಗತಿಸಿದರು, ನೂರಜಹಾನ ಕಿಲ್ಲೇದಾರ ವಂದಿಸಿದರು ಮಹಮ್ಮದ ಅಲಿ ತಹಶೀಲ್ದಾರ್ ನಿರೂಪಿಸಿದರು.

Edited By : Vijay Kumar
Kshetra Samachara

Kshetra Samachara

05/12/2020 07:39 pm

Cinque Terre

9.9 K

Cinque Terre

1

ಸಂಬಂಧಿತ ಸುದ್ದಿ