ಹುಬ್ಬಳ್ಳಿ : PublicNext ಸುದ್ದಿ App ಹಾಗೂ ನಗರದ ಸುನಿಧಿ ಕಲಾಸೌರಭ ಸಹಕಾರದೊಂದಿಗೆ ಹಮ್ಮಿಕೊಂಡಿರುವ ಆನ್ ಲೈನ್ ಏಕಪಾತ್ರಾಭಿನಯ ಸ್ಪರ್ಧೆಗೆ ರಾಜ್ಯದಾದ್ಯಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಏಕಪಾತ್ರ ಅಭಿನಯ ಸ್ಪರ್ಧೆಯಲ್ಲಿ, ಕೊರೊನಾ ಜಾಗೃತಿ ಮೂಡಿಸುವ ವಿಷಯ ಆಯ್ಕೆ ಮಾಡಿಕೊಂಡು ಅಭಿನಯಿಸಿದ್ದು ಗಮನಸೆಳೆದಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ನಿಯಮಿತವಾಗಿ ಕೈ ತೊಳೆಯುವುದು, ಸ್ಯಾನಿಟೈಜರ್ ಬಳಕೆ ಹಾಗೂ ಕಡ್ಡಾಯ ಮಾಸ್ಕ್ ಧರಿಸಲು ಸಾರ್ವಜನಿಕರನ್ನು ಪ್ರೇರೇಪಿಸುವ ಆಂಶ ಪ್ರಮುಖವಾಗಿವೆ.
ಇದರೊಂದಿಗೆ ರಾಮಾಯಣ, ಮಹಾಭಾರತದ ಪೌರಾಣಿಕ ಪಾತ್ರಗಳನ್ನು ಬಿಂಬಿಸುವ ಶ್ರೀರಾಮ, ಹನುಮಂತ, ಭೀಮ, ಅರ್ಜುನ, ಭೀಷ್ಮ ಹಾಗೂ ಐತಿಹಾಸಿಕ ವೀರರಾಣಿ ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ವೀರ ಸಂಗೊಳ್ಳಿ ರಾಯಣ್ಣ ವೇಷಭೂಷಣದೊಂದಿಗೆ ಮಕ್ಕಳು ಅಭಿನಯಿಸಿದ ಆಕರ್ಷಕ 125 ಕ್ಕೂ ಹೆಚ್ಚು ವಿಡಿಯೋಗಳು ತಲುಪಿವೆ ಎಂದು ಸಂಸ್ಥೆ ಕಾರ್ಯದರ್ಶಿ ಶ್ರೀಮತಿ ವೀಣಾ ಅಠವಲೆ ಹಾಗೂ ರಂಗಾಯಣದ ಮಾಜಿ ನಿರ್ದೇಶಕ ಹಿರಿಯ ರಂಗಕರ್ಮಿ ಸುಭಾಷ್ ನರೇಂದ್ರ ತಿಳಿಸಿದ್ದಾರೆ.
ಈ ಸ್ಪರ್ಧೆ ಆನ್ ಲೈನ್ ಆಗಿರುವುದರಿಂದ ಇದಕ್ಕೆ ಡಿಜಿಟಲ್ ವೇದಿಕೆ ಅತ್ಯವಶ್ಯವಾಗಿದೆ. ಡಿಜಿಟಲ್ ಮಾಧ್ಯಮವಾಗಿರುವ PublicNext ನೀಡುತ್ತಿರುವ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿರುವ ನರೇಂದ್ರ, ತಲುಪಿರುವ ಎಲ್ಲ ವಿಡಿಯೋಗಳ ವಿಂಗಡನೆ ಹಾಗೂ ಇನ್ನಿತರ ಆಯ್ಕೆ ಪ್ರಕ್ರಿಯೆ ನಡೆದಿದೆ. ಸ್ಪರ್ಧೆಗೆ ಆಯ್ಕೆಯಾಗುವ ವಿಡಿಯೋಗಳನ್ನು ಎಲ್ಲ ದೃಷ್ಟಿಕೋನದಿಂದ ತೀರ್ಪುಗಾರರು ಪರಿಶೀಲಿಸಲಿದ್ದಾರೆ ಎಂದೂ ತಿಳಿಸಿದ್ದಾರೆ.
ಕೆಲವೇ ದಿನಗಳಲ್ಲಿ ಸ್ಪರ್ಧೆ ವಿಜೇತರ ಹೆಸರು ಪ್ರಕಟಿಸಲಾಗುವುದು.
Kshetra Samachara
30/11/2020 10:37 am