ಹುಬ್ಬಳ್ಳಿ: ಅದು ವಾಣಿಜ್ಯನಗರಿ ಪ್ರತಿಷ್ಠಿತ ನಗರ,ಲಾಕ್ ಡೌನ್ ಸಂದರ್ಭದಲ್ಲಿ ಸಂಪೂರ್ಣ ಸ್ಥಬ್ದವಾಗಿದ್ದ ಆ ಓಣಿಯಲ್ಲಿ ಏಕಾಏಕಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.ಓಣಿಯ ತುಂಬೆಲ್ಲಾ ಬಣ್ಣಬಣ್ಣದ ರಂಗವಲ್ಲಿ, ಕಣ್ಣು ಹಾಯಿಸಿದಷ್ಟೂ ದೂರ ಕಣ್ಮನ ಸೆಳೆಯುವ ಚಿತ್ತಾರ, ಹಬ್ಬದಂತೆ ಅಲ್ಲಿಯ ಪ್ರತಿಯೊಂದು ಓಣಿಯ ಇಕ್ಕೆಲಗಳಲ್ಲಿಯೂ ಸಂಭ್ರಮ ಮನೆ ಮಾಡಿತ್ತು.ಅಷ್ಟಕ್ಕೂ ಅಲ್ಲಿ ನಡೆದಿದ್ದಾರೂ ಏನು ಅಂತೀರಾ ಈ ಸ್ಟೋರಿ ನೋಡಿ.....
ಕತ್ತಲ್ಲನ್ನು ಕಳೆದು ಬೆಳಕಿನ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯ ಕಮರಿಪೇಟೆಯ ಸುತ್ತಮುತ್ತಲಿನ 32 ಓಣಿಗಳಲ್ಲಿ ಆಕಾಶ ಬುಟ್ಟಿ ಹಬ್ಬದಲ್ಲಿ ಕಂಡು ಬಂದ ಸುಂದರ ಚಿತ್ರಣಗಳಿವು. ದೀಪಾವಳಿ ಮತ್ತು ಕಾರ್ತೀಕ ಮಾಸದ ಅಂಗವಾಗಿ ಅಲ್ಲಿಯ ಯುವಕರು ‘ಹುಬ್ಬಳ್ಳಿ ಆಕಾಶಬುಟ್ಟಿ ಹಬ್ಬ’ ಹಮ್ಮಿಕೊಂಡಿದ್ದರು. ಹಬ್ಬದ ಅಂಗವಾಗಿ ಮಕ್ಕಳಿಗೆ ಆಕಾಶ ಬುಟ್ಟಿ ತಯಾರಿಕೆ ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಬೆಳಿಗ್ಗೆಯಿಂದಲೇ ಮಕ್ಕಳು ಬಣ್ಣ ಬಣ್ಣದ ನಕ್ಷತ್ರ, ದೀಪ, ಚೌಕಾಕಾರ ಸೇರಿದಂತೆ ವಿವಿಧ ಬಗೆಯ ಆಕಾಶ ಬುಟ್ಟಿಗಳನ್ನು ತಯಾರಿಸಿದರು.
ಸ್ಪರ್ಧೆಯಲ್ಲಿ ಒಟ್ಟು 35 ಮಕ್ಕಳು ಪಾಲ್ಗೊಂಡಿದ್ದರು. ನಂತರ ತಾವು ತಯಾರಿಸಿದ ಆಕಾಶ ಬುಟ್ಟಿಗಳನ್ನು ಕಮರೆಮ್ಮ ದೇವಸ್ಥಾನದ ಸಭಾಂಗಣದಲ್ಲಿ ಪ್ರದರ್ಶಿಸಿದರು. ರಂಗೋಲಿ ಸ್ಪರ್ಧೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಹಿಳೆaಯರು ಪಾಲ್ಗೊಂಡಿದ್ದರು. ಮನೆಯ ಎದುರಿನ ರಸ್ತೆಯನ್ನೇ ಅಂಗಳವನ್ನಾಗಿ ಮಾಡಿಕೊಂಡು, ರಂಗೋಲಿ ಬಿಡಿಸಿದರು. ಸಹಸ್ರಾರ್ಜುನ ಮಹಾರಾಜ, ರಂಗೋಲಿ ಎದುರು ದೀಪ ಹಿಡಿದು ಕುಳಿತ ಗೃಹಿಣಿ, ಆಕಾಶ ಬುಟ್ಟಿ ತಯಾರಿಸುತ್ತಿರುವ ಮಕ್ಕಳು, ಮಹಾ ಪುರುಷರು, ಶ್ರೀಕೃಷ್ಣ, ರಾಷ್ಟ್ರಧ್ವಜ, ಚುಕ್ಕಿ ರಂಗೋಲಿ ಸೇರಿದಂತೆ ಬಗೆ ಬಗೆಯ ರಂಗೋಲಿಗಳು ಜನರನ್ನು ಆಕರ್ಷಿಸಿದವು.
ಒಂದೊಂದು ಓಣಿಗೆ ನಾಲ್ಕು ಬಹುಮಾನ ನಿಗದಿಪಡಿಸಲಾಗಿತ್ತು. ಸಂಜೆ ಜೈ ಭಾರತ್ ವೃತ್ತದಲ್ಲಿ ನಡೆದ ಆಕಾಶಬುಟ್ಟಿ ಹಬ್ಬ ಉದ್ಘಾಟನೆ ಸಮಾರಂಭದಲ್ಲಿ ಅವರಿಗೆ ಬಹುಮಾನ ವಿತರಿಸಲಾಯಿತು.ಒಟ್ಟಿನಲ್ಲಿ ಆಕಾಶ ಬುಟ್ಟಿ ಹಬ್ಬ ಎಲ್ಲರಿಗೂ ಮರೆಯಲಾಗದ ಮನರಂಜನೆ ನೀಡಿದ್ದಂತೂ ಸತ್ಯ...
Kshetra Samachara
23/11/2020 04:56 pm