ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತ್ತೆ ಪುಂಡರ ಹಾವಳಿ ಶುರುವಾಗಿದೆ. ಸಣ್ಣ ಪುಟ್ಟ ಮಾತಿಗೆ ಕೂಡಾ ಚಾಕುವಿನಿಂದ ಇರಿಯುವಂತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಯುವಕರಿಗೆ ಬುದ್ಧಿವಾದ ಹೇಳಲು ಹೋದ ಕಾಂಗ್ರೆಸ್ ಮುಖಂಡನ ಮೇಲೆ ಯುವಕರ ಗುಂಪೊಂದು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ರವಿವಾರ ರಾತ್ರಿ ನಡೆದಿದೆ.
ಹೀಗೆ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿರೋ ವ್ಯಕ್ತಿಯ ಹೆಸರು ತೌಸೀಫ್ ಲಕ್ಕುಂಡಿ. ಕಾಂಗ್ರೆಸ್ ಪಕ್ಷದ ಮುಖಂಡನಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಾತ. ಸೋನಿಯಾ ಗಾಂಧಿ ನಗರದಲ್ಲಿ ವಾಸ ಮಾಡುತ್ತಿದ್ದ ಈತನ ಮನೆಯ ಬಳಿ ಕೆಲವು ದಿನಗಳಿಂದ ಯುವಕರು ಬಂದು ನಿಲ್ಲುತ್ತಿದ್ದರು. ಹೀಗಾಗಿ ಯಾಕೆ ಇಲ್ಲಿ ನಿಲ್ಲುತ್ತೀರಾ ಎಂದು ಯುವಕರಿಗೆ ಪ್ರಶ್ನೆ ಕೂಡಾ ಮಾಡಿ ಅವರಿಗೆ ಬುದ್ದಿ ಹೇಳಿದ್ದ.
ಅಷ್ಟೇ ಅಲ್ಲದೇ ಇದೇ ವಿಚಾರಕ್ಕೆ ಶನಿವಾರ ಕೂಡಾ ಕೆಲವು ಯುವಕರ ಜೊತೆ ತೌಸೀಫ್ ವಾಗ್ವಾದ ಮಾಡಿದ್ದ. ಆದ್ರೆ ರವಿವಾರ ರಾತ್ರಿ ತೌಸೀಫ್ ಜೊತೆ ಆತನ ಮನೆ ಬಳಿ ನಿಲ್ಲುತ್ತಿದ್ದ ಇಸ್ಮಾಯಿಲ್ ಹಾಗೂ ಆತನ ಸ್ನೇಹಿತರು ಜಗಳ ತೆಗೆದು ಆತನ ಕಾಲು ಹಾಗೂ ಬೆನ್ನಿಗೆ ಚಾಕುವಿನಿಂದ ಇರಿದು ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿದ ಪರಿಣಾಮ ತೌಸೀಫ್ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಆತನ ಮನೆಯವರು ಕಿಮ್ಸ್ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ.
ಇತ್ತ ಚಾಕು ಇರಿದ ಆರೋಪಿಗಳಲ್ಲಿ ಇಸ್ಮಾಯಿಲ್ ಹಾಗೂ ಆತನ ಸಹಚರರನ್ನು ಬೆಂಡಿಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಕುರಿತು ಆರೋಪಿಗಳಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಮಾತಿಗಿಂತ ಸ್ಪೀಡ್ ಆಗಿ ಚಾಕು, ಚೂರಿ ಮಾತನಾಡುತ್ತಿದ್ದು ಇವುಗಳಿಗೆ ಪೊಲೀಸ್ ಕಮೀಷನರ್ ಲಾಬೂರಾಮ್ ಯಾವ ರೀತಿಯಾಗಿ ಬ್ರೇಕ್ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
-ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/10/2022 08:21 am