ಹುಬ್ಬಳ್ಳಿ: ವಾಸ್ತು ತಜ್ಞ ಡಾ. ಚಂದ್ರಶೇಖರ ಗುರೂಜಿ ಅವರ ಹತ್ಯೆ ಪ್ರಕರಣದ ತನಿಖೆಗೆ ಪೊಲೀಸ್ ಆಯುಕ್ತರಾದ ಲಾಭುರಾಮ್ ಹಾಗೂ ಡಿಸಿಪಿ ಸಾಹಿಲ್ ಬಾಗ್ಲಾ ನೇತೃತ್ವದಲ್ಲಿ ಐದು ವಿಶೇಷ ತಂಡ ರಚಿಸಲಾಗಿದೆ. ಈಗಾಗಲೇ ಕೊಲೆಯ ಪ್ರಮುಖ ಆರೋಪಿಗಳಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.
ಇನ್ನೂ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ವಿಶೇಷ ತಂಡಗಳ ಮೂಲಕ ನಗರದ ರೈಲು ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಬೆಳಗಾವಿ ರಾಮದುರ್ಗದಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಈಗಾಗಲೇ ಗುರೂಜಿ ಶವ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಗೆ ರವಾನಿಸಲಾಗಿದೆ. ಮೂಲತಃ ಬಾಗಲಕೋಟೆಯವರಾದ ಚಂದ್ರಶೇಖರ್ ಗುರೂಜಿ ಹುಬ್ಬಳ್ಳಿ ವಿದ್ಯಾನಗದಲ್ಲಿ ವಾಸವಾಗಿದ್ದರು. ವಾಸ್ತು ಕುರಿತು ಸಲಹೆ, ಸೂಚನೆ ನೀಡಲು ಜುಲೈ 3 ರಂದು ಪ್ರೆಸಿಡೆಂಟ್ ಹೋಟೆಲ್‌ನ ಕೊಠಡಿ ನಂ.220 ರಲ್ಲಿ ವಾಸವಾಗಿದ್ದರು. ಬುಧವಾರ ಕೊಠಡಿ ತೆರವುಗೊಳಿಸುವುದಾಗಿ ಹೇಳಿದ್ದರು.ಹೋಟೆಲ್‌ಗೆ ಬಂದಿದ್ದ ದುಷ್ಕರ್ಮಿಗಳು ಗುರೂಜಿಗೆ ದೂರವಾಣಿ ಕರೆ ಮಾಡಿ, ಸ್ವಾಗತಕಾರರ ಕೌಂಟರ್‌ನಲ್ಲಿ ಕಾಯುತ್ತಿರುವುದಾಗಿ ತಿಳಿಸಿದ್ದರು ಎಂದು ಹೋಟೆಲ್ ಸಿಬ್ಬಂದಿ ಹೇಳಿದರು.
ಸ್ವಾಗತಕಾರರ ಕೌಂಟರ್ ಗೆ ಬಂದ ಗುರೂಜಿ, ದುಷ್ಕರ್ಮಿಗಳ ಬಳಿ ಕೂತು ಕುಷಲೋಪರಿ ವಿಚಾರಿಸಿದ್ದಾರೆ. ಅವರಲ್ಲಿ ಒಬ್ಬ ಗುರೂಜಿ ಕಾಲಿಗೆ ನಮಸ್ಕರಿಸಿದ ಹಾಗೆ ಮಾಡಿದ್ದಾನೆ. ಅದೇ ವೇಳೆ ಮತ್ತೊಬ್ಬ ಚಾಕುವಿನಿಂದ ಇರಿದಿದ್ದಾನೆ. ಹತ್ಯೆ ಕೃತ್ಯ ನಡೆಯುತ್ತಿದ್ದಂತೆ ಸಿಬ್ಬಂದಿ ಭಯದಿಂದ ಹೊರಗೆ ಓಡಿ ಬಂದಿದ್ದಾರೆ. ಈ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/07/2022 05:42 pm