ಧಾರವಾಡ: ರಾತ್ರೋರಾತ್ರಿ ಮನೆಗೆ ನುಗ್ಗಿದ ಯುವಕನೋರ್ವ ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ಹೋದ ಘಟನೆ ಧಾರವಾಡದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಜೀಜಾಬಾಯಿ ಮಾಳಗೆ ಎಂಬುವವರೇ ಹಲ್ಲೆಗೊಳಗಾದವರು. ಶೀಗಿಗಟ್ಟಿ ತಾಂಡಾದ ಪರಶುರಾಮ ಲಮಾಣಿ ಎಂಬಾತನೇ ಚಾಕುವಿನಿಂದ ಹಲ್ಲೆ ಮಾಡಿದ ವ್ಯಕ್ತಿ. ಜೀಜಾಬಾಯಿ ಅವರ ಪುತ್ರಿ ಅಪ್ರಾಪ್ತೆಯಾಗಿದ್ದು, ಆಕೆಯ ಮೇಲೆ ಈ ಹಿಂದೆಯೂ ಪರಶುರಾಮ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದ. ಆಗ ಆತನ ಮೇಲೆ ಪೊಸ್ಕೊ ಪ್ರಕರಣ ಕೂಡ ದಾಖಲಾಗಿ ಜೈಲು ಪಾಲಾಗಿದ್ದ.
ಇದೀಗ ಜಾಮೀನಿನ ಮೇಲೆ ಹೊರ ಬಂದಿರುವ ಈತ ನಿನ್ನೆ ತಡರಾತ್ರಿ ಧಾರವಾಡದ ಮೇದಾರ ಓಣಿಯಲ್ಲಿರುವ ಜೀಜಾಬಾಯಿ ಅವರ ಮನೆಗೆ ನುಗ್ಗಿ, ನನ್ನ ಮೇಲೆ ದೂರು ಕೊಡುತ್ತೀರಾ? ನನ್ನ ವಿರುದ್ಧ ಸಾಕ್ಷಿ ಹೇಳುತ್ತೀರಾ ಅಂತಾ ಜೀಜಾಬಾಯಿ ಅವರ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿ, ಜೀಜಾಬಾಯಿ ಪುತ್ರಿಯನ್ನು ಅಪಹರಿಸಿಕೊಂಡು ಹೋಗಿದ್ದಾನೆ. ಸದ್ಯ ಈ ಘಟನೆ ಸಂಬಂಧ ಜೀಜಾಬಾಯಿ ಸಹೋದರ ಆನಂದ ಧಾರವಾಡದ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿ ಪರಶುರಾಮನ ಮೇಲೆ ಈ ಹಿಂದೆಯೂ ದೂರು ದಾಖಲಾಗಿ ಆತ ಅರೆಸ್ಟ್ ಆಗಿದ್ದ. ನಿನ್ನೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ದೂರು ದಾಖಲಾಗಿದ್ದು, ಎರಡು ತಂಡಗಳನ್ನು ರಚಿಸಿ ಆರೋಪಿಯನ್ನು ಶೀಘ್ರ ಪತ್ತೆ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಲಾಬುರಾಮ ತಿಳಿಸಿದರು.
ಸದ್ಯ ಹಲ್ಲೆಗೊಳಗಾಗಿರುವ ಜೀಜಾಬಾಯಿಗೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/06/2022 03:46 pm