ಹುಬ್ಬಳ್ಳಿ: ಕಳ್ಳರ ಕಣ್ಣು ಇದೀಗ ಬೈಪಾಸ್ ರಸ್ತೆಯ ಮೇಲೆ ಬಿದ್ದಿದೆ. ಅದರಲ್ಲೂ ಕುಸುಗಲ್ ಹೊರವಲಯದಿಂದ ಬೆಂಗಳೂರು ಎನ್.ಎಚ್- 4 ಗೆ ಸಂಪರ್ಕಿಸುವ ರಿಂಗ್ ರೋಡ್ ರಸ್ತೆಯನ್ನು ಟಾರ್ಗೆಟ್ ಮಾಡಿರುವ ಕಳ್ಳರು, ರಾತ್ರಿ ವೇಳೆ ವಾಹನಗಳನ್ನು ಅಡ್ಡಗಟ್ಟಿ ತಮ್ಮ ಕರಾಮತ್ತು ತೋರಿಸುತ್ತಿದ್ದಾರೆ. ಹೌದು… ಇತ್ತೀಚೆಗಷ್ಟೇ ಹುಬ್ಬಳ್ಳಿ ನಗರ ಹೊರವಲಯದ ರಿಂಗ್ ರಸ್ತೆ ನಿರ್ಮಾಣವಾಗಿದ್ದು, ಸಚಿವ ನಿತಿನ್ ಗಡ್ಕರಿ ಈ ರಸ್ತೆಗೆ ಚಾಲನೆ ನೀಡಿದ್ರು. ಆದ್ರೆ ಇದೀಗ ಈ ರಸ್ತೆಯಲ್ಲಿ ದರೋಡೆಕೋರರ ಹಾವಳಿ ಹೆಚ್ಚಾಗಿದ್ದು, ಜನ ಇಲ್ಲಿ ಓಡಾಡಲು ಭಯ ಪಡುವಂತಾಗಿದೆ.
ರಸ್ತೆ ಲೋಕಾರ್ಪಣೆಯಾಗುವ ಮುಂಚೆಯೇ ವಾಹನ ಸವಾರರೂ ಸಾಮಾನ್ಯವಾಗಿ ಈ ರಸ್ತೆಯಲ್ಲಿ ಓಡಾಡುತ್ತಿದ್ರು. ಆದ್ರೆ ವಾಹನಗಳ ಸಂಖ್ಯೆ ತೀರ ವಿರಳ. ಈಗಲೂ ಲಾರಿಗಳೇ ಹೆಚ್ಚಾಗಿ ಓಡಾಡುತ್ತವೆ. ಟ್ರಾಫಿಕ್ ಸಮಸ್ಯೆಯಿಂದ ದೂರಾಗಲು ಈ ರಸ್ತೆಯನ್ನು ಬೈಕ್ ಮತ್ತು ಕಾರು ಸವಾರರು ಬಳಸುತ್ತಾರೆ. ಆದ್ರೆ ರಾತ್ರಿ ಸಮಯದಲ್ಲಿ ಕಳ್ಳರು ವಾಹನಗಳನ್ನು ಅಡ್ಡಗಟ್ಟಿ ದರೋಡೆ ನಡೆಸುತ್ತಿದ್ದಾರೆ. ಈ ಭಯದಿಂದ ಸುತ್ತಮುತ್ತಲಿನ ಗ್ರಾಮದವರು ರಾತ್ರಿ ಈ ರಸ್ತೆಯಲ್ಲಿ ಹೋಗುವುದು ಕ್ಷೇಮವಲ್ಲ ಎಂದು ಹೇಳುತ್ತಿದ್ದಾರೆ.
ಇನ್ನು ರಿಂಗ್ ರಸ್ತೆಯಲ್ಲಿ ಖದೀಮರ ಹಾವಳಿ ಹೆಚ್ಚಾಗಿದ್ದರೂ ಸಹ ಗ್ರಾಮೀಣ ಪೊಲೀಸ್ ಠಾಣೆ ಮತ್ತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಕೇವಲ ಎರಡು ಪ್ರಕರಣಗಳು ದಾಖಲಾಗಿವೆ. ಇನ್ನು ಅನೈತಿಕ ಚಟುವಟಿಕೆಗಳಿಗೂ ವರ್ತುಲ ರಸ್ತೆ ಕಾರಣವಾಗುತ್ತಿದೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡು ದರೋಡೆಕೋರರ ಹೆಡೆಮುರಿ ಕಟ್ಟಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
Kshetra Samachara
20/05/2022 01:04 pm